‘ಕರ್ನಾಟಕದ ಹುಲಿ’ ಅಳವಂಡಿ ಸ್ವಾಮಿಗಳು

0
Charity lecture programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಏಕೀಕರಣ ಚಳವಳಿ, ಹೈದರಾಬಾದ ಕರ್ನಾಟಕ ವಿಮೋಚನಾ ಚಳವಳಿಯ ನೇತಾರರಾಗಿ ಕನ್ನಡ ನಾಡು-ನುಡಿಗೆ ತಮ್ಮನ್ನೇ ಸಮರ್ಪಿಸಿಕೊಂಡ ಮಹಾನ್ ಚೇತನ ಅಳವಂಡಿ ಶಿವಮೂರ್ತಿಸ್ವಾಮಿಗಳು. ಅವರ ಹೋರಾಟದ ಫಲವಾಗಿ ಹೈದ್ರಾಬಾದ ಕರ್ನಾಟಕದ ಅನೇಕ ಪ್ರದೇಶಗಳು ಕನ್ನಡ ನಾಡಿಗೆ ಬರಲು ಸಾಧ್ಯವಾಯಿತು. ದಿಟ್ಟ ಹೋರಾಟಗಾರ, ‘ಕರ್ನಾಟಕದ ಹುಲಿ’ ಅಳವಂಡಿ ಶಿವಮೂರ್ತಿಸ್ವಾಮಿಗಳಾಗಿದ್ದರೆಂದು ಗದುಗಿನ ಸರಕಾರಿ ಪ್ರಥಮದರ್ಜೆ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಎಸ್.ಯು. ಸಜ್ಜನಶೆಟ್ಟರ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗದುಗಿನ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ವೇದಮೂರ್ತಿ ಅಳವಂಡಿ ಶಿವಮೂರ್ತಿಸ್ವಾಮಿಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಕರ್ನಾಟಕ ಏಕೀಕರಣ ಚಳವಳಿ ಮತ್ತು ಅಳವಂಡಿ ಶಿವಮೂರ್ತಿ ಸ್ವಾಮಿಗಳು’ ಎಂಬ ವಿಷಯವಾಗಿ ಮಾತನಾಡಿದರು.
1955ರಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕರ್ನಾಟಕದ ಬಳ್ಳಾರಿ ಹೊಸಪೇಟೆ ಹಂಪಿ ಮತ್ತು ತುಂಗಭದ್ರಾ ಆಣೆಕಟ್ಟು ಪ್ರದೇಶವನ್ನು ವಿಶಾಲ ಆಂಧ್ರಪ್ರದೇಶಕ್ಕೆ  ಸೇರಿಸುವಂತೆ ಅಂದಿನ ಫಜಲ್ ಅಲಿ ಕಮಿಶನ್ ನಿರ್ಧರಿಸಿತ್ತು. ಇದನ್ನು ತೀವೃವಾಗಿ ವಿರೋಧಿಸಿದ ಸ್ವಾಮಿಗಳು, ಸಾವಿರಾರು ರೈತರನ್ನು ಸಂಘಟಿಸಿ ಆಮರಣ ಉಪವಾಸ ಸತ್ಯಾಗ್ರಹ ಮಾಡಿದ್ದರು. ಇದರ ಫಲವಾಗಿ ನ್ಯಾಯಮೂರ್ತಿ ಮಿಶ್ರ ಸಮಿತಿ ನೇಮಕವಾಗಿ ಬಳ್ಳಾರಿ ಮತ್ತು ತುಂಗಭದ್ರಾ ಡ್ಯಾಂ ಪ್ರದೇಶ ಕರ್ನಾಟಕಕ್ಕೆ ಸೇರ್ಪಡೆಗೊಳ್ಳುವ ಮೂಲಕ ಐತಿಹಾಸಿಕ ಫಟನೆಗೆ ಅವರು ಕಾರಣೀಭೂತರಾಗಿದ್ದಾರೆಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿವಮೂರ್ತಿ ಸ್ವಾಮಿಗಳು ಬದುಕಿನುದ್ದಕ್ಕೂ ಮಾನವೀಯತೆ ಮೆರೆದವರು. ರಾಷ್ಟ್ರೀಯ ಸಮಸ್ಯೆಗಳನ್ನು ತಮ್ಮ ಸಮರ್ಥ ವಾಕ್ಪಟುತ್ವದಿಂದ ಪರಿಣಾಮಕಾರಿಯಾಗಿ ಪ್ರತಿಪಾದಿಸಿ ಸರಕಾರದ ಗಮನಸೆಳೆದ ತತ್ವನಿಷ್ಠ ರಾಜಕಾರಣಿ, ಆದರ್ಶಜನನಾಯಕ. ತಮ್ಮ ೨೦ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಪ್ರಮುಖ ಪಾತ್ರ ವಹಿಸಿದ್ದರೆಂದರು.
ವೇದಿಕೆ ಮೇಲೆ ಕ.ವಿ.ವ. ಸಮಿತಿ ಕಾರ್ಯದರ್ಶಿ ವಿ.ಆರ್. ಕಟ್ಟಿಮನಿ ಹಿರೇಮಠ, ಪ್ರಾಚಾರ್ಯ ಡಾ. ಬಿ.ಬಿ. ಹೊಳಗುಂದಿ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾ.ಶಾ. ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಡಿ.ಎಸ್. ತಳವಾರ, ಎಸ್.ಎಸ್. ಕಳಸಾಪುರಶೆಟ್ರು, ಆರ್.ಡಿ. ಕಪ್ಪಲಿ, ಪ್ರ.ತೋ. ನಾರಾಯಣಪುರ, ಎಚ್.ಟಿ. ಸಂಜೀವಸ್ವಾಮಿ, ಎಚ್.ಕೆ.  ದಾಸರ, ಷಡಕ್ಷರಯ್ಯಸ್ವಾಮಿ ಕಣ್ವಿಮಠ, ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಶಿಲ್ಪಾ ಹಿರೇಕೇರೂರ, ಡಾ. ಎಂ.ಎಸ್. ಶಿರೋಳ,ಡಾ. ಎಸ್.ಎಮ್. ರಾಯನಗೌಡರ, ಟಿ.ಎಫ್. ನದಾಫ್, ವಿಜಯಲಕ್ಷ್ಮಿ ಆರ್.ಎಚ್, ಎಂ.ಎಲ್. ಬೆಳಧಡಿ, ಡಿ.ಆರ್. ಜಗ್ಗಲ್ ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
ಡಾ. ಹೊಳಗುಂದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೋಧಾ ನಾಯ್ಕರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಕಿಶೋರಬಾಬು ನಾಗರಕಟ್ಟಿ ವಂದಿಸಿದರು.
ಅಳವಂಡಿಯಲ್ಲಿ ಕರ್ನಾಟಕ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ, ಸಿದ್ದೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು, ಉಚಿತ ಪ್ರಸಾದ ನಿಲಯ, ಅನಾಥ ಮಕ್ಕಳ ನಿಲಯ, ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಸ್ಥಾಪಿಸಿ ಶೈಕ್ಷಣಿಕ ಕ್ಷೇತ್ರಕ್ಕೂ ನಾಂದಿ ಹಾಡಿದರು. ಸ್ವಾಮಿಗಳು ನಾಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಟಕ ಸರಕಾರ 2006ರಲ್ಲಿ ‘ಸುವರ್ಣ ಏಕೀಕರಣ ಪುರಸ್ಕಾರ’ ನೀಡಿ ಗೌರವಿಸಿದೆಯೆಂದು ಪ್ರೊ. ಸಜ್ಜನಶೆಟ್ಟರ ನುಡಿದರು.

Spread the love
Advertisement

LEAVE A REPLY

Please enter your comment!
Please enter your name here