ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸದ್ಯ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ರಂಗಾರೆಡ್ಡಿ ಜಿಲ್ಲಾ ಗ್ರಾಹಕ ಆಯೋಗವು ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿದ್ದಕ್ಕಾಗಿ ಮಹೇಶ್ ಬಾಬು ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸಾಯಿ ಸೂರ್ಯ ಡೆವಲಪರ್ಸ್ ಕಂಪನಿಯು ನಡೆಸಿದ ಅಕ್ರಮಕ್ಕೆ ಸಂಬಂಧಿಸಿದಂತೆ ಈ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಮಹೇಶ್ ಬಾಬು ಅವರ ಮೇಲೆ ದೂರು ನೀಡಲಾಗಿದೆ. ವೈದ್ಯರೊಬ್ಬರು ಸಲ್ಲಿಸಿದ ದೂರಿನ ಪ್ರಕಾರ, ಮಹೇಶ್ ಬಾಬು ಅವರ ಫೋಟೋ ಇರುವ ಕರಪತ್ರವನ್ನು ನೋಡಿದ ನಂತರ ಅವರು ಬಾಲಾಪುರ ಗ್ರಾಮದ ಲೇಔಟ್‌ನಲ್ಲಿ ಪ್ಲಾಟ್‌ಗಳನ್ನು ಖರೀದಿಸಿದರು ಎನ್ನಲಾಗಿದೆ. ಆ ಬಳಿಕ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದ್ದು ಬಳಿಕ ವೈದ್ಯ ಮತ್ತು ಇನ್ನೊಬ್ಬ ವ್ಯಕ್ತಿಯು ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಮಹೇಶ್ ಬಾಬು ಇದುವರೆಗೂ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ.
ಸಾಯಿ ಸೂರ್ಯ ಡೆವಲಪರ್ಸ್ ಕಂಪನಿಯಿಂದ ಫ್ಲಾಟ್ ಗಳನ್ನು ಖರೀದಿಸಲು ಮಹೇಶ್ ಬಾಬು ಪ್ರಚಾರ ಮಾಡಿದ್ದರು. ಆದರೆ ಅವು ನಕಲಿ ಸೈಟ್ ಎಂಬುದು ತಿಳಿದುಬಂದಿದೆ. ಇವರಿಂದ ವಂಚನೆಗೊಳಗಾದವರಲ್ಲಿ ಒಬ್ಬರಾದ ವೈದ್ಯನೊಬ್ಬ ತಾನು ನೀಡಿದ ಹಣವನ್ನು ಮರುಪಾವತಿಸಬೇಕೆಂದು ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದ್ದಾರೆ.
ಪ್ರತಿ ಪ್ಲಾಟ್‌ಗೆ 34.80 ಲಕ್ಷ ರೂ. ಪಾವತಿಸಲಾಗಿದೆ. ಆದಾಗ್ಯೂ, ಆ ಲೇಔಟ್‌ಗೆ ನಿಜವಾದ ಪರ್ಮಿಟ್ ಇಲ್ಲ ಎಂದು ನಂತರ ತಿಳಿದುಬಂದಿದೆ. ಡೆವಲಪರ್‌ಗಳಿಗೆ ಹಣವನ್ನು ಹಿಂದಿರುಗಿಸಲು ಕೇಳಿದಾಗ, ಕಂಪನಿಯ ಎಂಡಿ ಕಾಂಚರ್ಲಾ ಸತೀಶ್ ಚಂದ್ರಗುಪ್ತ ಕೇವಲ 15 ಲಕ್ಷ ರೂ.ಗಳನ್ನು ಹಿಂದಿರುಗಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ, ಮೆಸರ್ಸ್ ಸಾಯಿ ಸೂರ್ಯ ಡೆವಲಪರ್ಸ್ ಸನ್ಸ್ ಅವರನ್ನು ಮೊದಲ ಪ್ರತಿವಾದಿಯನ್ನಾಗಿ ಮತ್ತು ಮಾಲೀಕ ಕಂಚರ್ಲ ಸತೀಶ್ ಚಂದ್ರಗುಪ್ತ ಅವರನ್ನು ಎರಡನೇ ಪ್ರತಿವಾದಿಯನ್ನಾಗಿ ಹಾಗೂ ಈ ಬಗ್ಗೆ ಜಾಹೀರಾತು ನೀಡಿದ್ದ ಮಹೇಶ್ ಬಾಬು ಅವರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದೆ.