ವಿಜಯಸಾಕ್ಷಿ ಸುದ್ದಿ, ಲಕ್ಷ್ಮೀಶ್ವರ: ಕನ್ನಡ ನಾಡಿನ ವೀರವನಿತೆಯಾಗಿ ತನ್ನ ಅಪ್ರತಿಮ ಸಾಹಸ ಮತ್ತು ಶೌರ್ಯಗಳಿಂದ ದೇಶದ ಸ್ವಾತಂತ್ರಕ್ಕಾಗಿ ಮೆರೆದ ಕಿತ್ತೂರು ರಾಣಿ ಚೆನ್ನಮ್ಮರ ಧೈರ್ಯ ಇಂದಿಗೂ ಪ್ರಸ್ತುತವಾಗಿದ್ದು, ರಾಣಿ ಚನ್ನಮ್ಮ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕವಾಗಿದ್ದಾಳೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಅಭಿಪ್ರಾಯಪಟ್ಟರು.
ಅವರು ಗುರುವಾರ ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರವಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿಯ ಬಳಿ ವೀರಶೈವ ಪಂಚಮಸಾಲಿ ಸಂಘ ಮತ್ತು ವಿವಿಧ ಸಂಘಟನೆಗಳಿಂದ ಚೆನ್ನಮ್ಮರ 201ನೇ ವಿಜಯೋತ್ಸವ ಹಾಗೂ 247ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾತಂತ್ರ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಕೀರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮಳಿಗೆ ಸಲ್ಲುತ್ತದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರಕ್ಕಾಗಿ ವೀರಮರಣವನ್ನಪ್ಪಿದಳು. ಅವರ ಧೈರ್ಯ, ಸಾಹಸ, ಇಂದಿಗೂ ಆದರ್ಶವಾಗಿದ್ದು, ಅವರ ನಡೆ-ನುಡಿ, ದೇಶಪ್ರೇಮ ಎಲ್ಲರಲ್ಲಿಯೂ ಬರಬೇಕು ಎಂದು ಹೇಳಿದರು.
ನಾಗರಾಜ ಚಿಂಚಲಿ, ಬಸವರಾಜ ಅರಳಿ, ನೀಲಪ್ಪ ಕರ್ಜೆಕಣ್ಣವರ, ಪ್ರವೀಣ ಬಾಳಿಕಾಯಿ ಮಾತನಾಡಿ, ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಸ್ತ್ರೀ ಶಕ್ತಿ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದು, ಸ್ವಾತಂತ್ರದ ಕಹಳೆಯೂದಿ ಬ್ರಿಟಿಷರ ಸೊಕ್ಕಡಗಿಸಿದ ಪ್ರಥಮ ಸ್ವಾತಂತ್ರ ಹೋರಾಟಗಾರ್ತಿಯಾಗಿದ್ದಾಳೆ. ಚೆನ್ನಮ್ಮಾಜಿ ಯಾವುದೇ ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ಈದ ದೇಶವೇ ಅವರ ಶೌರ್ಯ-ಪರಾಕ್ರಮಕ್ಕೆ ತಲೆಬಾಗಿದೆ. ಅಂತಹ ವೀರ ಮಹಿಳೆಯ ವಿಜಯೋತ್ಸವ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗುರುಪ್ಪ ಮುಳಗುಂದ, ಶಿವನಗೌಡ್ರ ಅಡರಕಟ್ಟಿ, ಶಿವಜೋಗೆಪ್ಪ ಚಂದರಗಿ, ಮಲ್ಲಿಕಾರ್ಜುನ ನೀರಾಲೋಟಿ, ಮಹಾದೇವಪ್ಪ ಅಣ್ಣಿಗೇರಿ, ಬಸವರಾಜ ಗೋಡಿ, ರಾಜು ಲಿಂಬಿಕಾಯಿ, ಮುರುಘೇಂದ್ರಸ್ವಾಮಿ ಹಿರೇಮಠ, ಜಗದೀಶ ಪುರಾಣಿಕಮಠ ಮುಂತಾದವರು ಇದ್ದರು.