HomeBengaluru Newsಕಣ್ಣೀರ ವಿದಾಯದ ನಡುವೆ ಚೆನ್ನಮ್ಮ ಅಂತಿಮ ಯಾತ್ರೆ ಆರಂಭ; ದೇವೇಗೌಡರಿಂದ ಪತ್ನಿಗೆ ಕೊನೆಯ ಪೂಜೆ

ಕಣ್ಣೀರ ವಿದಾಯದ ನಡುವೆ ಚೆನ್ನಮ್ಮ ಅಂತಿಮ ಯಾತ್ರೆ ಆರಂಭ; ದೇವೇಗೌಡರಿಂದ ಪತ್ನಿಗೆ ಕೊನೆಯ ಪೂಜೆ

For Dai;y Updates Join Our whatsapp Group

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಭಾನುವಾರ ಬೆಂಗಳೂರಿನಿಂದ ಆರಂಭವಾಗಿದೆ.

ಚೆನ್ನಮ್ಮ ಅವರ ಪಾರ್ಥಿವ ಶರೀರ ಹೊತ್ತ ವಾಹನ ಹಾಸನದತ್ತ ಪ್ರಯಾಣ ಬೆಳೆಸಿದ್ದು, ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಕಣ್ಣೀರಿನ ವಿದಾಯ ನೀಡಿದ್ದಾರೆ.

ಅಂತಿಮ ಯಾತ್ರೆ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಪತಿ ಎಚ್.ಡಿ. ದೇವೇಗೌಡ ಅವರು ಪತ್ನಿಗೆ ಮೊದಲ ಪೂಜೆ ನೆರವೇರಿಸಿ ಅಂತಿಮ ನಮನ ಸಲ್ಲಿಸಿದರು.

ಈ ವೇಳೆ ದೇವೇಗೌಡರು ಚೆನ್ನಮ್ಮ ಅವರ ಹಣೆಗೆ ಕುಂಕುಮ ಇಟ್ಟು, ತಲೆಗೆ ಹೂವು ಮುಡಿಸಿ ಭಾವುಕರಾದರು. ಬಳಿಕ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳು ಪೂಜೆ ಸಲ್ಲಿಸಿ ಅಗಲಿದ ಹಿರಿಯ ಜೀವಕ್ಕೆ ಗೌರವ ಅರ್ಪಿಸಿದರು.

ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಅಂತಿಮ ಯಾತ್ರೆಯ ವಾಹನ ಬೆಂಗಳೂರಿನಿಂದ ಹಾಸನದತ್ತ ಹೊರಟಿತು.

ಅಂತಿಮ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ. ಮಾರ್ಗದುದ್ದಕ್ಕೂ ಸಾರ್ವಜನಿಕರು, ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಚೆನ್ನಮ್ಮ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಈ ಮಾರ್ಗದಲ್ಲಿ ಸಾಗಲಿದೆ ಅಂತಿಮ ಯಾತ್ರೆ:

ಚೆನ್ನಮ್ಮ ಅವರ ಪಾರ್ಥಿವ ಶರೀರ ಸಾಗುವ ಮಾರ್ಗದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಂತಿಮ ಯಾತ್ರೆ ಸಾಗುವ ಪ್ರಮುಖ ಸ್ಥಳಗಳು:

  • ನೆಲಮಂಗಲ ಕ್ರಾಸ್
  • ಸೋಲೂರು ಕ್ರಾಸ್
  • ಮರೂರು ಹ್ಯಾಂಡ್ ಪೋಸ್ಟ್
  • ಕುಣಿಗಲ್ ಕ್ರಾಸ್
  • ಬೆಳ್ಳೂರು ಕ್ರಾಸ್
  • ಕದಬಳ್ಳಿ ಕ್ರಾಸ್
  • ಹಿರಿಸಾವೆ ಕ್ರಾಸ್
  • ಚನ್ನರಾಯಪಟ್ಟಣ
  • ಎಲೆಯೂರು (ಉದಯಪುರ)
  • ಶಾಂತಿಗ್ರಾಮ
  • ಬೂವನಹಳ್ಳಿ ಕ್ರಾಸ್
  • ಹಾಸನ ಡೈರಿ ಸರ್ಕಲ್
  • ಎನ್.ಆರ್. ಸರ್ಕಲ್
  • ಮೊಸಳೆ ಹೊಸಹಳ್ಳಿ

ಹೊಳೆನರಸೀಪುರದಲ್ಲಿ ಸಾರ್ವಜನಿಕ ಅಂತಿಮ ದರ್ಶನ:

ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಭಾನುವಾರ ರಾತ್ರಿ ಹೊಳೆನರಸೀಪುರದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ.

ಜುಲೈ 20ರಂದು ಬೆಳಗ್ಗೆ 7 ಗಂಟೆಯಿಂದ 9.30ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬೆಳಗ್ಗೆ 10 ಗಂಟೆಗೆ ಹೊಳೆನರಸೀಪುರದಿಂದ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ.

ಕ್ಯಾತನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹುಟ್ಟೂರು ಹರದನಹಳ್ಳಿ ಗ್ರಾಮದ ಸಮೀಪದ ಕ್ಯಾತನಹಳ್ಳಿಯ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಡೆಯಲಿದೆ.

ಬೆಳಗ್ಗೆ 11.30ರ ವೇಳೆಗೆ ಪಾರ್ಥಿವ ಶರೀರ ಅಂತ್ಯಕ್ರಿಯೆ ಸ್ಥಳ ತಲುಪಲಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.15ರವರೆಗೆ ಅಂತಿಮ ವಿಧಿವಿಧಾನಗಳು ನಡೆಯಲಿವೆ.

ರಾಜ್ಯ ಸರ್ಕಾರದ ವತಿಯಿಂದ ಚೆನ್ನಮ್ಮ ಅವರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುತ್ತಿದ್ದು, ಗಣ್ಯರು, ಜನಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

72 ವರ್ಷಗಳ ದಾಂಪತ್ಯ ಜೀವನ ನಡೆಸಿದ ದೇವೇಗೌಡ ಮತ್ತು ಚೆನ್ನಮ್ಮ ಅವರ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದ ಚೆನ್ನಮ್ಮ ಅವರ ಅಗಲಿಕೆ ಕುಟುಂಬದವರು ಹಾಗೂ ಅಭಿಮಾನಿಗಳಲ್ಲಿ ಅಪಾರ ದುಃಖ ಮೂಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img