ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಿರೇಬಣದಲ್ಲಿರುವ ಜೀರ್ಣೋದ್ಧಾರಗೊಂಡ ನೂತನ ಚಿದಂಬರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಚಿದಂಬರೇಶ್ವರ ಜಯಂತ್ಯುತ್ಸವವನ್ನು ಸಂಪ್ರದಾಯದಂತೆ ಅದ್ದೂರಿಯಾಗಿ ಆಚರಿಸಲಾಯಿತು.
ಮುಂಜಾನೆ ಕಾಕಡಾರತಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಗಳು ಅಗಡಿಯ ಪೂಜ್ಯ ಶ್ರೀ ಶ್ರೀಧರ ಚಕ್ರವರ್ತಿ ಹಾಗೂ ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ಕುಲಕರ್ಣಿ ಇವರ ಉಪಸ್ಥಿತಿಯಲ್ಲಿ, ಪ್ರಸನ್ನ ಜೋಶಿ, ಅನಂತಭಟ್ ಜೋಶಿ, ನರಸಿಂಹ ಭಟ್ ಜೋಶಿ, ನಾಗರಾಜ ಪೂಜಾರ, ಚಿಕ್ಕರಸ ಪೂಜಾರ, ಶ್ರೀಕಾಂತ ಪೂಜಾರ, ರಾಘವೇಂದ್ರ ಪೂಜಾರ ಇವರ ನೇತೃತ್ವದಲ್ಲಿ ಚಿದಂಬರ ಸ್ವಾಮಿಗೆ ರುದ್ರಾಭಿಷೇಕವನ್ನು ನೆರವೇರಿಸಲಾಯಿತು.
ಮಧ್ಯಾಹ್ನ 12 ಗಂಟೆಗೆ ಚಿದಂಬರೇಶ್ವರ ತೊಟ್ಟಿಲೋತ್ಸವ ಕಾರ್ಯಕ್ರಮವು ಸುಮಂಗಲೆಯರು ಹಾಗೂ ಮಹಿಳಾ ಭಜನಾ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ಪದ್ಧತಿಯಂತೆ ವಿಧಿವತ್ತಾಗಿ ನಡೆಸಲಾಯಿತು. ನಂತರ ಮಹಾಮಂಗಳಾರತಿ, ಭಜನೆಗಳು ಜರುಗಿದವು.
ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಕಾರ್ತಿಕೋತ್ಸವ ಮತ್ತು ಅಷ್ಟಾವಧಾನ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಭಜನೆ, ಸಂಗೀತ ಸೇವೆಗಳು ನಡೆದವು. ದೇವಸ್ಥಾನದ ಧರ್ಮದರ್ಶಿ ಪ್ರಕಾಶ ಕುಲಕರ್ಣಿ, ಚಿಕ್ಕಣ್ಣ ಜೋಶಿ, ಪ್ರಸನ್ನ ಕುಲಕರ್ಣಿ, ಧನಲಕ್ಷ್ಮೀ ಕುಲಕರ್ಣಿ, ಗೋಪಾಲ ಪಡ್ನೀಸ್, ವೆಂಕಟೇಶ ಗುಡಿ, ಕೆ.ಎಸ್. ಕುಲಕರ್ಣಿ, ಅರವಿಂದ ದೇಶಪಾಂಡೆ, ಗುರರಾಜ ಪಾಟೀಲ ಕುಲಕರ್ಣಿ, ಶ್ವೇತಾ ಜೋಶಿ, ಮಹಾದೇವಗೌಡ ಪಾಟೀಲ, ಯಲ್ಲಪ್ಪ ಮಾಚೇನಹಳ್ಳಿ, ರಾಜು ಕಳ್ಳಿ ಮುಂತಾದವರಿದ್ದರು.


