ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದಲ್ಲಿ ರೈತರ ಹಿತ ಕಾಯುವಲ್ಲಿ ವಿಶೇಷವಾದ ಕಾಳಜಿ ಹೊಂದಿರುವ ಸಿ.ಎಂ. ಸಿದ್ದರಾಮಯ್ಯನವರು ರೈತರಿಗಾಗಿ ಅನೇಕ ಕಾರ್ಯಕ್ರಮಗಳಿಗೆ ಸ್ಪಂದನೆ ನೀಡಿದ್ದು, ರೈತರ ಬಗ್ಗೆ ಉತ್ತಮ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಅವರು ಪಟ್ಟಣದ ಚಂದನ ಸ್ಕೂಲ್ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಿಎನ್ಆರ್ ರಾವ್ ಅವರ ವಿಜ್ಞಾನ ವಿಸ್ತೃತ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಬಾಯಿ ಮಾತಿನಿಂದ ಹೇಳುವ ಜಾಯಮಾನ ಸಿದ್ದರಾಮಯ್ಯನವರದ್ದಲ್ಲ. ಏಕೆಂದರೆ ಇಂದು ಅನೇಕ ಸಮಸ್ಯೆಗಳಿಗೆ ರೈತರು ಹೋರಾಟಕ್ಕಿಳಿದಾಗ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಅವುಗಳಿಗೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರ ಪರವಾಗಿರುವ ನಿಲುವು ಪ್ರದರ್ಶಿಸಿದ್ದಾರೆ. ಕಬ್ಬು ಬೆಳೆಗಾರರ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಿ ಟನ್ಗೆ ರೂ.50 ವಿಶೇಷ ಸಹಾಯಧನ ನೀಡಿರುವುದು, ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಲು ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.
ಲಕ್ಷ್ಮೇಶ್ವರದಲ್ಲಿ ರೈತರು ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸುವಂತೆ ಹೋರಾಟ ಮಾಡಿದ್ದರು. ಈ ಹೋರಾಟಕ್ಕೆ ಸ್ಪಂದಿಸಿದ ಸಿ.ಎಂ. ಅವರು ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಿರುವುದಲ್ಲದೆ ಗದಗ, ಮುಂಡರಗಿ, ಶಿರಹಟ್ಟಿ, ರೋಣ ಸೇರಿದಂತೆ ಅನೇಕ ಕಡೆಗಳಲ್ಲಿಯೂ ಸಹ ರೈತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



