ವಿಜಯಸಾಕ್ಷಿ ಸುದ್ದಿ, ಗದಗ: ಮೌನಯೋಗಿ ಚಿಕೇನಕೊಪ್ಪದ ಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಫೆ.3ರಿಂದ 5ರವರೆಗೆ ನೆರವೇರಲಿದೆ. ಜಾತ್ರಾ ಮಹೋತ್ಸವದ ನಿಮಿತ್ತ ಮಹಾತ್ಮರ ಜೀವನ ದರ್ಶನ ಪ್ರವಚನ, ಮಹಾರಥೋತ್ಸವ, ಲಘು ರಥೋತ್ಸವ, ಜಾನಪದ ಕಲಾಮೇಳ, ಸುಮಂಗಲೆಯರಿಗೆ ಉಡಿ ತುಂಬುವದು, ಸಾಮೂಹಿಕ ವಿವಾಹ, ತುಲಾಬಾರ, ಧಾರ್ಮಿಕ ಚಿಂತನ ಗೋಷ್ಠಿ, `ಶರಣಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಿವಶಾಂತವೀರ ಶರಣರು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಫೆ.3ರಂದು ಬೆಳಿಗ್ಗೆ 8ಕ್ಕೆ ಕುಷ್ಟಗಿಯ ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹಾಗೂ ಹಿರೇವಡ್ಡಟ್ಟಿ ಹಿರೇಮಠದ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಂದ ಧ್ವಜಾರೋಹಣ ನೆರವೇರಲಿದೆ. ಸಂಜೆ 5ಕ್ಕೆ ಪ್ರಕಾಶ ಹುಗ್ಗಿ ಹಾಗೂ ಶರಣರ ಬಳಗ ರೋಣ ಅವರ ಮಹಾಮನೆಯಿಂದ ರಥದ ಕಳಸ ಆಗಮಿಸುವದು. ಸಂಜೆ 6ಕ್ಕೆ ಲಘು ರಥೋತ್ಸವ ನಡೆಯಲಿದೆ ಎಂದರು.
ಫೆ.3ರಂದು ಸಂಜೆ 7ಕ್ಕೆ ಮಹಾತ್ಮರ ಜೀವನ ದರ್ಶನ ಪ್ರವಚನ ಮಂಗಲೋತ್ಸವ ಜರುಗುವದು. ಹೂವಿನ ಹಡಗಲಿ ಗವಿಮಠದ ಡಾ. ಹಿರಿಯ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಫೆ.4ರಂದು ಬೆಳಿಗ್ಗೆ 5ಕ್ಕೆ ಚನ್ನವೀರ ಶರಣರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಲಿಂಗದೀಕ್ಷೆ-ಅಯ್ಯಾಚಾರ ಜರುಗಲಿದೆ ಎಂದು ಹೇಳಿದರು.
ಫೆ.4ರಂದು ವಿವಾಹ ಮಹೋತ್ಸವ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಸುಕ್ಷೇತ್ರ ಹಿರೇಮಾಗಡಿಯ ಶಿವಮೂರ್ತಿ ಮುರಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಂತರ ಗೀತಾ ಭತ್ತದ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗುವುದು. ಈ ವೇಳೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಗುಂಡೂರಿನ ಎಸ್.ವಿ. ಪಾಟೀಲ ಅವರಿಗೆ ಸಿದ್ದಲಿಂಗನಗೌಡ ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ನವಲಗುಂದ ಸಂಯುಕ್ತಾಶ್ರಯದಲ್ಲಿ `ಶರಣಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎ.ಎನ್. ನಾಗರಳ್ಳಿ, ವಿ.ಬಿ. ಪೊಲೀಸ್‌ಪಾಟೀಲ, ಎಂ.ಬಿ. ಸಿಕ್ಕೆದೇಸಾಯಿ, ವಿ.ಎಸ್. ಹಿರೇಮಠ, ಎಸ್.ಬಿ. ಪಾಟೀಲ, ಎಸ್.ಎಸ್. ಪಾಟೀಲ ಇದ್ದರು.
ಫೆ.4ರಂದು ಬಳಗಾನೂರಿನ ಶರಣರ ಬಳಗ ಹಾಗೂ ಡಾ.ಶಿವಕುಮಾರಯ್ಯ ಹಿರೇಮಠ ಮಹಾಮನೆಯಿಂದ ರಥದ ಹಗ್ಗವನ್ನು ತರಲಾಗುವದು. ಸಂಜೆ 5ಕ್ಕೆ ಜಗದ್ಗುರುಗಳು, ಹರಗುರು ಚರ ಮೂರ್ತಿಗಳ ನೇತೃತ್ವದಲ್ಲಿ ಮಹಾರಥೋತ್ಸವ ಜರುಗುವದು. ಸಂಜೆ 6ಕ್ಕೆ ಧಾರ್ಮಿಕ ಚಿಂತನಗೋಷ್ಠಿ ನಡೆಯಲಿದ್ದು, ಗವಿಮಠದ ಜಗದ್ಗುರು ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಫೆ.5ರಂದು ಸಂಜೆ 5ಕ್ಕೆ ಕಡುಬಿನ ಕಾಳಗ ಹಾಗೂ ಶರಣರ ಬೆಳ್ಳಿಮೂರ್ತಿ ಉತ್ಸವ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.