ಚಿಕ್ಕಬಳ್ಳಾಪುರ:- ಡ್ರಾಪ್ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಜರುಗಿದೆ.
ಗಣೇಶ್ ಬಂಧಿತ ಆರೋಪಿ. ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂತ್ರಸ್ತೆ, ಬಾಗೇಪಲ್ಲಿಯಿಂದ ವಾಪಸ್ಸು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಬಳಿಯ ಬಸ್ನಿಲ್ದಾಣದಲ್ಲಿ ನಿಂತಿದ್ದಳು. ಆ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ಗಣೇಶ್ ಅಪ್ರಾಪ್ತ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನಂತೆ. ನಂತರ ಭಯ ಭೀತನಾದ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮಾಡಿದ ಪಾಪಕೃತ್ಯವನ್ನು ಹೇಳಿಕೊಂಡಿದ್ದಾನೆ. ಗಣೇಶ್ ಸ್ನೇಹಿತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಬೆನ್ನಲ್ಲೇ ಪೊಲೀಸರು ನಿರ್ಜನ ಪ್ರದೇಶಕ್ಕೆ ಬಂದು ಹುಡುಕಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆರೋಪಿಯ ಮೊಬೈಲ್ ಟ್ರೇಸ್ ಮಾಡಲಾಗಿದ್ದು, ನಿರ್ಜನ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪತ್ತೆಹಚ್ಚಲಾಗಿದೆ. ಬಳಿಕ ವಿದ್ಯಾರ್ಥಿನಿಯನ್ನು ಸ್ಥಳೀಯ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ರವಾನಿಸಿದ್ದು, ಆರೋಪಿ ಗಣೇಶ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.



