ಚಿಕ್ಕಮಗಳೂರು: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಪೋಷಕರೇ ಹೆಚ್ಚು. ಇಂಗ್ಲಿಷ್ ಕಲಿಯಲ್ಲ, ಡಿಸೆನ್ಸಿ ಇರಲ್ಲ, ನೀಟ್ ಇಲ್ಲ ಎನ್ನುವ ಆರೋಪಗಳ ನಡುವೆ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳನ್ನೇ ಮೀರಿಸುವ ಸಾಧನೆ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಕುಗ್ರಾಮದ ಸರ್ಕಾರಿ ಶಾಲೆ, 32 ಮಕ್ಕಳನ್ನು ಫ್ಲೈಟ್‌ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ದು ಎಲ್ಲರ ಗಮನ ಸೆಳೆದಿದೆ. ಇದುವರೆಗೆ ಯಾವ ಖಾಸಗಿ ಶಾಲೆಯೂ ಮಾಡದ ಈ ಸಾಧನೆ, ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.
ಕೈಯಲ್ಲಿ ಫ್ಲೈಟ್ ಟಿಕೆಟ್ ಹಿಡಿದು ಕುಳಿತ ಮಕ್ಕಳ ಮುಖದಲ್ಲಿನ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಟ್ಟು 420 ವಿದ್ಯಾರ್ಥಿಗಳಿದ್ದು, 5, 6 ಮತ್ತು 7ನೇ ತರಗತಿಯ ಮಕ್ಕಳನ್ನು ವಾರ್ಷಿಕ ಶೈಕ್ಷಣಿಕ ಪ್ರವಾಸದ ಭಾಗವಾಗಿ ಫ್ಲೈಟ್‌ನಲ್ಲಿ ಕರೆದೊಯ್ಯಲಾಗಿದೆ.
ಕೆಲವು ಪೋಷಕರು ಮಕ್ಕಳನ್ನು ಕಳಿಸಲು ನಿರಾಕರಿಸಿದ್ದರೆ, ಇನ್ನೂ ಕೆಲವರು ಮಕ್ಕಳು ಸಣ್ಣವರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಪೋಷಕರ ಒಪ್ಪಿಗೆ ಪಡೆದು ಶಿಕ್ಷಕರು 32 ಮಕ್ಕಳನ್ನು ಫ್ಲೈಟ್ ಪ್ರವಾಸಕ್ಕೆ ಕರೆದೊಯ್ದು, ಸರ್ಕಾರಿ ಶಾಲೆಗಳು ಯಾರಿಗೂ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ಫ್ಲೈಟ್ ಪ್ರವಾಸದಿಂದ ಮಕ್ಕಳು ಮಾತ್ರವಲ್ಲದೆ ಪೋಷಕರೂ ಸಹ ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಮಕ್ಕಳು ಖುಷಿಯಿಂದ ತಮ್ಮ ಸ್ನೇಹಿತರನ್ನ ಫ್ಲೈಟ್‌ನಲ್ಲಿ ಪ್ರವಾಸಕ್ಕೆ ಕಳುಹಿಸಿದ್ದಕ್ಕೆ ಹೆಮ್ಮೆ ಪಟ್ಟಿದ್ದಾರೆ. ಸರ್ಕಾರಿ ಶಾಲೆಗಳ ಸಾಮರ್ಥ್ಯವನ್ನು ಪ್ರಶ್ನಿಸುವವರಿಗೆ ಮುತ್ತಿಗೆಪುರ ಸರ್ಕಾರಿ ಶಾಲೆಯ ಶಿಕ್ಷಕರು ಇದೊಂದು ಗಟ್ಟಿಯಾದ ಉತ್ತರ ನೀಡಿದ್ದಾರೆ.



