ಚಿಕ್ಕಮಗಳೂರು: ಕಾಫಿನಾಡಿನ ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕನೊಬ್ಬರನ್ನು ಬಲಿ ಪಡೆದ ಕಾಡಾನೆ ವಿರುದ್ಧ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದ ದುರ್ಘಟನೆ ನಂತರ ಅರಣ್ಯ ಇಲಾಖೆ ಮಹತ್ವದ ಕಾರ್ಯಾಚರಣೆ ಆರಂಭಿಸಿದೆ.
ಸಕ್ರೆಬೈಲು ಆನೆ ಶಿಬಿರ ದಿಂದ 5 ಸಾಕಾನೆಗಳ ವಿಶೇಷ ದಳವನ್ನು ಕರೆತರಲಾಗಿದ್ದು, 3 ಕಾಡಾನೆಗಳ ಗುಂಪಿನಲ್ಲಿ ಮಾನವ ಹತ್ಯೆಗೈದ ಆನೆಗೆ ಗುರಿಯಾಗಿಸಿ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಉಳಿದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಸಂಚಾರದ ಮೇಲೆ ನಿಗಾ ವಹಿಸಲಾಗುತ್ತದೆ.
ಫೆ.16ರಂದು ಕಾಡಾನೆ ದಾಳಿಯಲ್ಲಿ ಯಲ್ಲಪ್ಪ ಮೃತಪಟ್ಟ ಬಳಿಕ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು. ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಮುಂದೆ ಜಮಾಯಿಸಿದ ಜನರು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಇದೀಗ ಸರ್ಕಾರದ ಆದೇಶದ ಮೇರೆಗೆ ಅರಣ್ಯ ಇಲಾಖೆ ಕಾಡಾನೆ ಸೆರೆಹಿಡಿಯಲು ಸಜ್ಜಾಗಿದೆ. ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ಸೂಚನೆ ನೀಡಲಾಗಿದೆ.



