ಚಿಕ್ಕಮಗಳೂರು: ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಮದವೇರಿದ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಇದೇ ಪ್ರದೇಶದಲ್ಲಿ ವಾರದ ಹಿಂದಷ್ಟೇ ಕಾರ್ಮಿಕನೊಬ್ಬನನ್ನು ಈ ಕಾಡಾನೆ ಬಲಿಪಡೆದಿತ್ತು. ಮೃತರನ್ನು ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಬೋರಮ್ಮ (33) ಎಂದು ಗುರುತಿಸಲಾಗಿದೆ. ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಆನೆ ಮದವೇರಿರುವ ಕಾರಣದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ ಆನೆ ದಾಳಿ ನಡೆಸಿ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮೃತದೇಹವನ್ನು ಆಂಬುಲೆನ್ಸ್ನಲ್ಲಿ ಸಾಗಿಸಿದರೆ ಜನರಿಗೆ ವಿಷಯ ಗೊತ್ತಾಗುತ್ತದೆ ಎಂಬ ಕಾರಣದಿಂದ ಗೂಡ್ಸ್ ಆಟೋದಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲಿಂದ ಮೇಲೆ ಕಾಡಾನೆ ದಾಳಿಯಿಂದ ಸಾವುಗಳು ಸಂಭವಿಸುತ್ತಿದ್ದರೂ ಶಾಶ್ವತ ಪರಿಹಾರ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಕಾಡಾನೆ ದಾಳಿಗೆ 9 ಮಂದಿ ಬಲಿಯಾಗಿದ್ದು, ಸತ್ತ ನಂತರದ ಪರಿಹಾರ ಮಾತ್ರ ಸಾಕಾಗದು—ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ.



