ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರ ಶೈಕ್ಷಣಿಕ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಅಭಿನಂದನಾ ಗ್ರಂಥವನ್ನು ಪ್ರಕಟಿಸಲು ಸಿದ್ಧತೆ ನಡೆದಿದೆ ಎಂದು ಹಿರಿಯ ಸಾಹಿತಿ ಮತ್ತು ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಐ.ಕೆ. ಕಮ್ಮಾರ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಡರಗಿ ರಸ್ತೆಯಲ್ಲಿ ಅಡವಿಸೋಮಾಪುರ ಗ್ರಾಮದ ಸಮೀಪವಿರುವ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಹೊಸ ಲೋಕವನ್ನೆ ಸೃಷ್ಟಿಸಿದೆ. ಸಂಸ್ಥೆಯ ಕ್ಯಾಂಪಸ್ ಕೇವಲ ಶಿಕ್ಷಣವಷ್ಟೇ ಅಲ್ಲದೆ, ಮಕ್ಕಳಲ್ಲಿ ಸಂಸ್ಕಾರ ಕಲಿಸುವ ಬದುಕು ಕಟ್ಟಿಕೊಡುವ ಕೇಂದ್ರವಾಗಿ ಬದಲಾಗಿದೆ. ಇಂತಹ ಅಪರೂಪದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿರುವ ಪ್ರೊ. ಚಿಕ್ಕಟ್ಟಿ ಅವರ 40 ವರ್ಷಗಳ ಶೈಕ್ಷಣಿಕ ಸೇವೆಯನ್ನು ಗ್ರಂಥರೂಪದಲ್ಲಿ ಹೊರತರಲು ನಿರ್ಧರಿಸಲಾಗಿದೆ ಎಂದರು.
ಪ್ರೊ. ಚಿಕ್ಕಟ್ಟಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಲಟ್ಟಿ ಗ್ರಾಮದವರು. ಬಾಲ್ಯದಿಂದಲೇ ಶಿಸ್ತನ್ನು ಮೈಗೂಡಿಸಿಕೊಂಡಿದ್ದ ಅವರು, ಗದಗಿನಲ್ಲಿ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿದ್ದಾರೆ. 1983ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎಸ್‌ಸಿ ಪದವಿ ಪೂರ್ಣಗೊಳಿಸಿದ ನಂತರ, ಗದಗಿನ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 1988ರವರೆಗೆ ಉಪನ್ಯಾಸಕ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ನಂತರ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಮನೆ ಪಾಠದಿಂದ ಆರಂಭಗೊಂಡ ಅವರ ಪಯಣ, ಇವತ್ತು ಪೂರ್ವ ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜಿನವರೆಗೆ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವ ಅವರ ಪ್ರಯತ್ನ ಮೆಚ್ಚುವಂಥದ್ದು ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಂಥ ಸಮಿತಿಯ ಅಧ್ಯಕ್ಷ ಎಸ್.ಎಲ್. ಹುಯಿಲಗೋಳ, ವಿ.ಎಂ. ಮುಂದಿನಮನಿ, ಶೋಭಾ ಸ್ಥಾವರಮಠ, ಶೋಭಾ ಭಟ್, ಪುಷ್ಪಲತಾ ಬೆಲೇರಿ, ರಿಯಾನಾ ಮುಲ್ಲಾ, ಶರಣಪ್ಪ ಗುಗಲೋತ್ತರ, ಮರಿಯಪ್ಪ ಹರಿಜನ, ಶ್ರೀಶೈಲ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಪ್ರೊ. ಚಿಕ್ಕಟ್ಟಿ ಗುರುಗಳು ಪಟ್ಟಿರುವ ಶ್ರಮ ಮತ್ತು ದಿಟ್ಟ ಹೆಜ್ಜೆಗಳ ವಿಶೇಷತೆಯನ್ನು ಮನಗಂಡು, ಅವರ ಶಿಷ್ಯ ಬಳಗ ಮತ್ತು ಅಭಿಮಾನಿಗಳ ಅಪೇಕ್ಷೆಯಂತೆ ಈ ಅಭಿನಂದನಾ ಗ್ರಂಥವನ್ನು ಪ್ರಕಟಿಸಲಾಗುತ್ತಿದೆ ಎಂದು ಐ.ಕೆ. ಕಮ್ಮಾರ ತಿಳಿಸಿದರು.


