ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಿಲ್ಲದ ದಂಪತಿಗೆ ಮಗುವೊಂದನ್ನು ಹಸ್ತಾಂತರಿಸುವದು ಪುಣ್ಯದ ಕಾರ್ಯ. ಹೃದಯಸ್ಪರ್ಶಿ ಹಾಗೂ ಭಾವುಕತನವನ್ನು ಉಂಟುಮಾಡುವ ಈ ಸನ್ನಿವೇಶ ಮಾನವೀಯ ಸಂಬಂಧವನ್ನು ಬೆಸೆಯುವಂತಿದೆ ಎಂದು ನಗರದ ಬಾಲವಿನಾಯಕ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ರವಿ ಹೇಳಿದರು.
ಅವರು ಶುಕ್ರವಾರ ಬೆಟಗೇರಿಯ ಸೇವಾ ಭಾರತಿ ಸಂಸ್ಥೆಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಪೋಷಣೆಗೊಂಡ ಮಗುವನ್ನು ಕೇರಳದ ಮಕ್ಕಳಿಲ್ಲದ ದಂಪತಿಗೆ ದತ್ತು ಮಗುವಾಗಿ ಹಸ್ತಾಂತರಿಸಿ ಮಾತನಾಡಿದರು.
ಎಲ್ಲಿಯೋ ಜನಿಸಿದ ಅಲಕ್ಷಿತ ಮಗುವನ್ನು ದತ್ತು ಸ್ವೀಕಾರ ಸಂಸ್ಥೆಯೊAದು ಸಂರಕ್ಷಿಸಿ ಪೋಷಣೆ ಮಾಡಿ, ಕಾನೂನು ಪ್ರಕಾರ ಮಕ್ಕಳಿಲ್ಲದ ದಂಪತಿಗೆ ಹಸ್ತಾಂತರಿಸುವ ಮೂಲಕ ಆ ಮಗುವಿಗೆ ಭವ್ಯ ಭವಿಷ್ಯವನ್ನು ರೂಪಿಸುವದು ಒಂದೆಡೆಯಾದರೆ, ಮಕ್ಕಳಿಲ್ಲದ ಕೊರಗಿನಲ್ಲಿರುವ ದಂಪತಿಯ ಮಡಿಲಿಗೆ ಇಂತಹ ಮಗುವನ್ನು ಹಸ್ತಾಂತರಿಸುವದು ನಿಜಕ್ಕೂ ಪುಣ್ಯಪ್ರಾಪ್ತಿಯ ಮಹತ್ಕಾರ್ಯವಾಗಿದೆ ಎಂದರು.
ದೇವರ ಆಜ್ಞೆ, ಅನುಗ್ರಹದಿಂದಾಗಿ ಈ ದತ್ತು ಕಾರ್ಯ ಪೂರ್ಣಗೊಳ್ಳುತ್ತದೆ. ದೇವರು ವ್ಯಕ್ತಿಯ ಮೂಲಕ ಇಂತಹ ಕಾರ್ಯ ಸಾಕಾರಗೊಳ್ಳಲು ಆಶೀರ್ವದಿಸಿದ ಫಲದಿಂದಾಗಿ ಇಂತಹ ಕಾರ್ಯಗಳು ನಿರ್ವಿಘ್ನವಾಗಿ ಯಶಸ್ವಿಗೊಳ್ಳುವವು ಎಂದರಲ್ಲದೆ, ಮಗುವನ್ನು ಪಡೆದ ದಂಪತಿ ಈ ಮಗುವಿಗೆ ಉತ್ತಮ ಸಂಸ್ಕಾರ, ಶಿಕ್ಷಣ, ಭವಿಷ್ಯ ನೀಡಲಿ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ವಹಿಸಿದ್ದರು. ವೇದಿಕೆಯ ಮೇಲೆ ಮಲ್ಲಿಕಾ ಉಪಸ್ಥಿತರಿದ್ದರು. ದತ್ತು ಮಗುವನ್ನು ಪಡೆದುಕೊಂಡ ಕೇರಳದ ಶಿವಕುಮಾರ ದಂಪತಿ ತಮಗೆ ಮಗುವನ್ನು ದತ್ತುವಾಗಿ ನೀಡಿದ್ದು ನಮ್ಮ ಮನೆ-ಮನ ಬೆಳಗಿದಂತಾಗಿದೆ. ಮಗುವಿಗೆ ಉತ್ತಮ ಭವಿಷ್ಯ ನೀಡುವುದಾಗಿ ಹೇಳಿದರಲ್ಲದೆ, ಸಂಸ್ಥೆಯ ಕಾರ್ಯವನ್ನು ಬಣ್ಣಿಸಿದರು.
ನಾಗವೇಣಿ ಕಟ್ಟಿಮನಿ ಪ್ರಾರ್ಥಿಸಿದರು, ನರಸಿಂಹ ಕಾಮಾರ್ತಿ ಪರಿಚಯಿಸಿದರು. ಮಂಜುನಾಥ ಚನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ರಾಜಪುರೋಹಿತ ನಿರೂಪಿಸಿದರು. ಕೊನೆಗೆ ರಾಜೇಶ ಖಟವಟೆ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ನಾಗಲಾಪೂರ, ಲಲಿತ್ ಜೈನ್, ಗಣೇಶ ಮಾಗುಂಡ, ಬಸವರಾಜ ಪಟ್ಟಣಶೆಟ್ಟಿ, ಪ್ರಮೋದ ಹಿರೇಮಠ, ಶ್ರೀಧರ ಕಾಂಬಳೆ, ಅಭಿಷೇಕ ಮಾಳೋದೆ, ಜ್ಯೋತಿ ಸಂಗಮದ ಸೇರಿದಂತೆ ದತ್ತು ಕೇಂದ್ರದ ಆಯಾಗಳು ಪಾಲ್ಗೊಂಡಿದ್ದರು.
ಇನ್ನೋರ್ವ ಮುಖ್ಯ ಅತಿಥಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ ಪ್ರಚಾರಕರಾದ ನರೇಂದ್ರ ಜೀ ಮಾತನಾಡಿ, ಅಮೂಲ್ಯ ದತ್ತು ಕೇಂದ್ರವು ಮನುಷ್ಯತ್ವ ಮತ್ತು ಮಾನವೀಯ ಕಾರ್ಯಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ. ಇದುವರೆಗೂ 68 ಮಕ್ಕಳಿಗೆ ಬದುಕು ನೀಡುವಲ್ಲಿ ತನ್ನದೇ ಆದ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತ ಮುನ್ನಡೆದಿರುವ ಅಮೂಲ್ಯ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.