ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಪುರಸಭೆ ಲಕ್ಷ್ಮೇಶ್ವರ ಇವರ ಸಹಯೋಗದಲ್ಲಿ ಶುಕ್ರವಾರ ಸಂತೆಯ ದಿನ ಬಾಲಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೈಗೊಂಡು 13 ಬಾಲ ಕಾರ್ಮಿಕರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ವಿಶೇಷ ಸಭೆಗೆ ಹಾಜರುಪಡಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಕವಲೂರ, ಬಾಲಕಾರ್ಮಿಕ ಮಕ್ಕಳನ್ನು ಗುರುತಿಸುವ ಕಾರ್ಯಚರಣೆಯ ಹಿಂದೆ ಅವರ ನಿಜವಾದ ಕಾಳಜಿ, ಪಾಲನೆ-ಪೋಷಣೆ-ರಕ್ಷಣೆ ಉದ್ದೇಶವಿದೆ. ಇಂತಹ ಮಕ್ಕಳು ಮನೆಯಲ್ಲಿ ತಂದೆ-ತಾಯಿಗಳ ಅನಾರೋಗ್ಯ, ಬದುಕಿನ ಅಗತ್ಯತೆ, ಶಾಲೆ ರಜೆ ಇದ್ದ ಕಾರಣ ಅನಿವಾರ್ಯವಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಂತಹ ಅರ್ಹ ಮಕ್ಕಳಿಗೆ ಸರ್ಕಾರ ಹಾಗೂ ಮಕ್ಕಳ ಕಲ್ಯಾಣ ಸಮಿತಿಯಿಂದ ಪಾಲಕರ ಹೊರತುಪಡಿಸಿ ಪ್ರತಿ ತಿಂಗಳು 4 ಸಾವಿರ ರೂ ಸಹಾಯಧನ ಕಲ್ಪಿಸುವ ಯೋಜನೆಯಡಿ ಸೇರಿಸಲು ಈ ಕಾರ್ಯಚರಣೆ ನಡೆಸಲಾಗುತ್ತದೆ.
ಕಾರ್ಯಾಚರಣೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸುಪರ್ಣ ಬ್ಯಾಹಟ್ಟಿ, ದೇವೇಂದ್ರಪ್ಪ ಈರಗಾರ, ಸಮಾಲೋಚಕ ಪ್ರಕಾಶ ಗಾಣಿಗೇರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕ್ ಹಳ್ಳೂರ, ರಮೇಶ ಕಳ್ಳಿಮನಿ, ಲಲಿತಾ ಕುಂಬಾರ, ಮಲ್ಲಪ್ಪ ಹೊಸಳ್ಳಿ, ಕಾರ್ಮಿಕ ನಿರೀಕ್ಷಕರ ಕಛೇರಿ ಸಿಬ್ಬಂದಿ ರಾಣಿ ಪಾಟೀಲ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಅಫ್ತಾಬ ಡಾಲಾಯತ, ಗಿರಿಜಾ ಹಿರೇಮಠ, ಶಶಿಧರ ಮಠಪತಿ ಮುಂತಾದವರಿದ್ದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಸವರಾಜ ಸಂಶಿ ಮಾತನಾಡಿ, ಬಾಲಕರರಷ್ಟೇ ಅಲ್ಲದೇ ಬಾಲಕಿಯರು ಸಹಿತ ಕೆಲವು ಕಡೆ ಕೆಲಸ ಮಾಡುತ್ತಿದ್ದು, ಅಲ್ಲಿನ ಸುರಕ್ಷಿತ ಕ್ರಮಗಳ ಜತೆಗೆ ಫೋಕ್ಸೋ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ವೇಳೆ ಪಾಲಕರಿಗೂ ಮಕ್ಕಳ ಪೋಷಣೆಯ ಜವಾಬ್ದಾರಿ, ಹಕ್ಕು-ಕರ್ತವ್ಯ ಮತ್ತು ಕಾಳಜಿ ಬಗ್ಗೆ ತಿಳಿ ಹೇಳಲಾಗುತ್ತದೆ. ಕುಟುಂಬ, ಸಮಾಜದಿಂದ ನಿರ್ಲಕ್ಷ್ಯ, ಶೋಷಣೆಗೊಳಗಾದ 16 ವರ್ಷದೊಳದಗಿನ ಮಕ್ಕಳಿಗೆ ವಿದ್ಯಾಭ್ಯಾಸ, ಪೋಷಣೆಗಾಗಿ 3 ವರ್ಷಗಳವರೆಗೆ 4 ಸಾವಿರ ರೂ ಸಹಾಯಧನ ಕಲ್ಪಿಸಲಾಗುವುದು ಎಂದರು.