ಮಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹದಲ್ಲಿ ಬಳ್ಳಾರಿ ಪ್ರಥಮ, ಬೆಳಗಾವಿ ದ್ವಿತೀಯ ಸ್ಥಾನದಲ್ಲಿದೆ ಎನ್ನಲು ನಾಚಿಕೆ ಆಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನಮ್ಮ ಇಲಾಖೆಯಿಂದ ಸಾಕಷ್ಟು ಕ್ರಮ ಆಗಿದೆ. ಇದು ಕೇವಲ ಇಲಾಖೆಯ ಲೋಪ ಎನ್ನಲಾಗದು. ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ, ಕಾನೂನು, ಆರೋಗ್ಯ, ಪೊಲೀಸ್ ಇಲಾಖೆ ಸಹಕಾರ ನೀಡಬೇಕು. ಎಲ್ಲರೂ ಒಗ್ಗಟಾಗಿ ಕೆಲಸ ಮಾಡಿದಾಗ ಮಾತ್ರ ಬಾಲ್ಯ ವಿವಾಹ ಪದ್ಧತಿ ತಡೆಗಟ್ಟಲು ಸಾಧ್ಯ ಎಂದು ಅವರು ಹೇಳಿದರು.
ಮೂಢನಂಬಿಕೆ ಅಥವಾ ಯಾವ ಕಾರಣಕ್ಕೆ ಬಾಲ್ಯ ವಿವಾಹ ಮಾಡುತ್ತಾರೆಂದು ತಿಳಿಯುತ್ತಿಲ್ಲ. ಅದನ್ನು ತಡೆಯಲು ಗ್ರಾಮದಿಂದ ಜಿಲ್ಲಾ ಮಟ್ಟದ ತನಕ ಸಮಿತಿ ಇದೆ. ಅದರಲ್ಲಿ ವಕೀಲರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಇದ್ದಾರೆ. ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಕೂಡಾ ಆಗುತ್ತಿದೆ. ನಮಗೆ ಗೊತ್ತಾದ ತಕ್ಷಣ ಎಫ್‌ಐಆರ್ ದಾಖಲಿಸುತ್ತೇವೆ ಎಂದರು.