ಬೆಂಗಳೂರು: ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಸಾವನ್ನಪ್ಪಿದ ಘಟನೆ ನಿನ್ನೆ ಮಂಡ್ಯದಲ್ಲಿ ನಡೆದಿದೆ. ಪೊಲೀಸರ ವರ್ತನೆ ಸಾರ್ವಜನಿಕರು ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದ್ರು. ಇನ್ನೂ ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇವತ್ತು ಸಭೆ ಕರೆದಿದ್ದೇನೆ. ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಪೊಲೀಸರು ಸೋಮವಾರ ಮಾನವೀಯತೆ ತೋರಲಿಲ್ಲ. ಸ್ವಂತಿಕೆಯೂ ಪ್ರದರ್ಶಿಸಲಿಲ್ಲ ಎಂದು ಮಂಡ್ಯ ಟ್ರಾಫಿಕ್ ಪೊಲೀಸರ ನಡೆಗೆ ಖಂಡನೆ ವ್ಯಕ್ತಪಡಿಸಿದರು.
ಸೋಮವಾರದ ಘಟನೆ ದುರಾದೃಷ್ಟಕರ. ಆ ಘಟನೆ ನಡೆಯಬಾರದಿತ್ತು. ಪೊಲೀಸರು ಪೋಷಕರ ಜತೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಈ ರೀತಿ ನಡೆದುಕೊಳ್ಳದಂತೆ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಮೂವರನ್ನು ಅಮಾನತು ಮಾಡಿದ್ದು, ಶಿಸ್ತುಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯೋದು ಬೇಡ. ಎಲ್ಲೋ ಮೂಲೆಯಲ್ಲಿ ನಿಂತು ಏಕಾಏಕಿ ಬಂದು ಪೊಲೀಸರು ವಾಹನ ತಡೆಯುತ್ತಾರೆ. ಈ ರೀತಿ ಮಾಡಬಾರದು, ಅದಕ್ಕೇ ಆದ ಒಂದು ಪದ್ಧತಿ ಇದೆ. ಆ ಪದ್ಧತಿಯನ್ನು ಪೊಲೀಸರು ಅನುಸರಿಸಬೇಕು ಎಂದು ಹೇಳಿದರು.



