ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳೇ ಈ ದೇಶದ ಸಂಪತ್ತು. ಅವರಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣವನ್ನು ಕೊಟ್ಟು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇಂದಿನ ಮಕ್ಕಳು ಓದಿನ ಕಡೆ ಗಮನ ಕೊಡುತ್ತಿಲ್ಲ. ಹೆಚ್ಚು ಓದಿದಷ್ಟ ಮಕ್ಕಳಲ್ಲಿ ಜ್ಞಾನ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಓದಿನತ್ತ ಸೆಳೆಯುವ ಕೆಲಸ ನಡೆಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಪೂರ್ಣಾಜಿ ಖರಾಟೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಜರುಗಿದ ಮಕ್ಕಳ ದಿನಾಚರಣೆ ಮತ್ತು ಪಾಲಕ, ಪೋಷಕ ಶಿಕ್ಷಕರ ಮಹಾಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಇಂದು ಮಕ್ಕಳ ಸಾಹಿತ್ಯ ರಚನೆ ಕಡಿಮೆ ಆಗುತ್ತಿದೆ. ಮಕ್ಕಳಲ್ಲಿ ಓದು ಕಡಿಮೆ ಆಗಿರುವುದೇ ಇದಕ್ಕೆ ಮುಖ್ಯ ಕಾರಣ. ಆಧುನಿಕ ತಂತ್ರಜ್ಞಾನ ಬಂದಂತೆ ಮಕ್ಕಳು ಪುಸ್ತಕಗಳಿಂದ ದೂರ ಸರಿಯುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಅಂಟಿಸಿಕೊಡಲಾದ ಮೊಬೈಲ್ ಬಳಕೆ ಅವರಿಗೆ ಇಂದು ಚಟವಾಗಿ ಪರಿಣಮಿಸಿದ್ದು ವಿಷಾದನೀಯ ಎಂದರು.
ಮುಖ್ಯ ಶಿಕ್ಷಕ ಬಿ.ಎಂ. ಕುಂಬಾರ, ಪರಮೇಶ ಲಮಾಣಿ, ಸೋಮಣ್ಣ ಯತ್ತಿನಹಳ್ಳಿ, ಶಿವಲಿಂಗಯ್ಯ ಹೊತ್ತಗಿಮಠ, ಎಸ್‌ಡಿಎಂಸಿ ಉಪಾಧ್ಯಕ್ಷೆ ನಿಖಿತಾ ಶೇರಖಾನೆ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಬಸಾಪುರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಸ್.ಬಿ. ಲಕ್ಷ್ಮೇಶ್ವರ ಮಕ್ಕಳ ಹಾಡುಗಳನ್ನು ಹಾಡಿದರು. ಎನ್.ಆರ್. ಸಾತಪುತೆ, ಗೊರವರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಸೊರಟೂರ, ಸಿಆರ್‌ಪಿ ಶ್ರೀನಿವಾಸ ಮತ್ತೂರ, ಆರ್.ಕೆ. ಉಪನಾಳ, ನೇತ್ರಾವತಿ ಕುಂಬಾರ, ಬೀರಪ್ಪ ಪೂಜಾರ ವೇದಿಕೆಯಲ್ಲಿದ್ದರು. ಎಲ್.ಎ. ಬಣಕಾರ ಸ್ವಾಗತಿಸಿದರು. ಎಚ್.ಡಿ. ನಿಂಗರಡ್ಡಿ ನಿರೂಪಿಸಿದರು. ಆರ್.ಎಂ. ಶಿರಹಟ್ಟಿ ವಂದಿಸಿದರು. ಎಸ್‌ಡಿಎಂಸಿ ಸದಸ್ಯರು, ಮಕ್ಕಳ ಪಾಲಕರು ಇದ್ದರು.


