ಗದಗ:- ಈ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನದಲ್ಲಿ ಭಾರಿ ಕಡಿತಗೊಳಿಸಿರುವ ರಾಜ್ಯ ಕಾಂಗ್ರೆಸ್ ಆಡಳಿತದ ವಿರುದ್ಧ ಕಟ್ಟಡ ಕಾರ್ಮಿಕರು ಆಕ್ರೋಶ ಹೊರ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ಗದಗದಲ್ಲಿ ಜರುಗಿದೆ.
ಕಾಂಗ್ರೆಸ್ ಸರ್ಕಾರವು, ಹಿಂದೆ ಇದ್ದ ಬಿಜೆಪಿ ಸರ್ಕಾರಕ್ಕಿಂತಲೂ ಶೇಕಡಾ 70 ರಷ್ಟು ಸ್ಕಾಲರ್ಶಿಪ್ ಕಡಿತ ಮಾಡಿದೆ. ಹೀಗಾಗಿ ಬಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ದುಬಾರಿಯಾಗಿದೆ. ಕಳೆದ ಮೂರು ವರ್ಷಗಳಿಂದ ಮಕ್ಕಳಿಗೆ ಸ್ಕಾಲರ್ಶಿಪ್ ಬಂದಿಲ್ಲ ಅಂತ ಪ್ರತಿಭಟನಾ ನಿರತ ಕಾರ್ಮಿಕರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂಬಂಧ ಗದಗದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾರ್ಮಿಕರ ವಾದ ಕರೆಕ್ಟ್ ಇದೆ. ಆದ್ರೆ ಒಂದು ವಾದ ಕರೆಕ್ಟ್ ಇಲ್ಲ. ಶೈಕ್ಷಣಿಕ ಧನಸಹಾಯ ಆರಂಭ ಮಾಡಿದ್ದೇ ನಾನು. ಮೊದಲು ಕೊಡುತ್ತಿರಲಿಲ್ಲ. ಮಾನದಂಡ ಇಟ್ಕೊಂಡು ಆರಂಭ ಮಾಡಿದ್ದೆವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 5 ಸಾವಿರ ಇದ್ದದ್ದು 15 ಸಾವಿರ ಮಾಡಿದ್ರು. 15 ಸಾವಿರ ಇದ್ದದ್ದು 45 ಸಾವಿರ ಮಾಡಿದ್ರು.
45 ಸಾವಿರ ಇದ್ದದ್ದು, ಒಂದೂವರೆ ಲಕ್ಷ ಮಾಡಿದ್ರು. ಯಾವುದೇ ಮಾನದಂಡ ಇಲ್ಲ.. ಜಾಸ್ತಿ ದುಡ್ಡು ಕೊಟ್ರು. ಅಂದು ಕೇವಲ ಎರಡೂವರೆ ಲಕ್ಷ ಅರ್ಜಿ ಇತ್ತು. ಈಗ ನಮಗೆ ಬಂದಿದ್ದು 13 ಲಕ್ಷ ಅರ್ಜಿ. 13 ಲಕ್ಷ ಅರ್ಜಿಗಳಿಗೆ ನಾವು ಆ ರೀತಿ ಹಣ ಕೊಟ್ರೆ 1800 ಕೋಟಿ ಬೇಕಾಗುತ್ತೆ. ನಮ್ಮ ಆದಾಯ ಇರೋದು 800-1000 ಕೋಟಿ ಮಾತ್ರ.. ಇದು ಸೆಸ್ ಹಣ. ಯಾವುದೇ ಸರ್ಕಾರದಲ್ಲ. ಇದು ಗ್ಯಾರಂಟಿಗೆ ಸಂಬಂಧವಿಲ್ಲ. ನಾವು ಒಂಬತ್ತು ಲಕ್ಷ ಜನರಿಗೆ ಹಣ ಕೊಟ್ಟಿದ್ದೇವೆ.
13-14 ಲಕ್ಷ ಅರ್ಜಿ ಬಂದಿದೆ. 56 ಲಕ್ಷ ಕಾರ್ಡ್ ಮಾಡಿಕೊಂಡಿದ್ದಾರೆ. ನಾವು 36 ಲಕ್ಷಕ್ಕೆ ತಂದಿದ್ದೇವೆ. 26 ಲಕ್ಷ ನಕಲಿ ಕಾರ್ಡ್ ಇದ್ದಾವೆ. ಇನ್ನೂ ಪರಿಶೀಲನೆಯಲ್ಲಿದೆ. ಇನ್ನೂ ಆರೇಳು ತಿಂಗಳಲ್ಲಿ ಯಾರು ಅರ್ಹರು ಇದ್ದಾರೆ. ಅರ್ಜಿ ಹಾಕಿದ್ದಾರೆ ಸಂಪೂರ್ಣ ಲಾಭ ಸಿಗಲಿದೆ ಎಂದರು.
ಹಿಂದಿನ ಸರ್ಕಾರದಲ್ಲಿ ಶೈಕ್ಷಣಿಕ ಧನಸಹಾಯ:
ಆಗಸ್ಟ್ 24, 2021 ರಂದು ಬಿಜೆಪಿ ಸರ್ಕಾರದ ಗೆಜೆಟ್:
LKG, UKG-5 ಸಾವಿರ.
1st to 4th Std- 5 ಸಾವಿರ.
5th to 8th Std -8 ಸಾವಿರ.
9th to 10th Std 12 ಸಾವಿರ.
PUC -15 ಸಾವಿರ.
Diploma/ITI- 20 ಸಾವಿರ.
Bsc, Nursing/GNM/ANM-40 ಸಾವಿರ.
D.ed-25 ಸಾವಿರ B.ed-35 ಸಾವಿರ.
LLB/LLM-30 ಸಾವಿರ.
BE/B.Tech-50 ಸಾವಿರ.
M.Tech/ME-60 ಸಾವಿರ.
MBBS/BAMS-60 ಸಾವಿರ.
MD-75 ಸಾವಿರ.
ಈಗಿನ ಸರ್ಕಾರದಲ್ಲಿ ಶೈಕ್ಷಣಿಕ ಧನಸಹಾಯ:-
ಈಗಿನ ಸರ್ಕಾರ ಮಾರ್ಚ 16, 2024 ರಂದು ಹೊರಡಿಸಿದ ಅಧಿಸೂಚನೆ:
1 ರಿಂದ 5ನೇ ತರಗತಿವರೆಗೆ- 1800.
6 ರಿಂದ 8ನೇ ತರಗತಿವರೆಗೆ-2400.
9 ರಿಂದ 10ನೇ ತರಗತಿವರೆಗೆ-3 ಸಾವಿರ.
ಪಿಯುಸಿ-4600.
ಯಾವುದೇ ಪದವಿ-10 ಸಾವಿರ.
BE, BTEC/ಸ್ನಾತಕೋತ್ತರ ಪದವಿ/B.sc Nursing/GNM-10 ಸಾವಿರ.
MBBS, BAMS-11 ಸಾವಿರ.
ಹೀಗೆ ಪ್ರತಿಯೊಂದು ಶೈಕ್ಷಣಿಕ ಸಹಾಧನದಲ್ಲಿ ಭಾರಿ ಕಡಿತ ಮಾಡಿದ್ದಕ್ಕೆ ಕಾರ್ಮಿಕರು ರೊಚ್ಚಿಗೆದ್ದಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದರು.
ಕಳೆದ ಮೂರು ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಧನ ಸಹಾಯ ನೀಡಿಲ್ಲ. ಮಕ್ಕಳ ಮದುವೆ ಧನಸಹಾಯ ಬಂದಿಲ್ಲ. ಆರೋಗ್ಯ ಧನಸಹಾಯ ಬಂದಿಲ್ಲ. ಹೆರಿಗೆ ಭತ್ಯೆ ಬಂದಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.