ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಯವ್ವಾ ರ‍್ರಿ, ಯಪ್ಪಾ ರ‍್ರಿ, ಅಕ್ಕಾರ ರ‍್ರಿ, ಟೀಚರ ರ‍್ರಿ, ಸರ ರ‍್ರಿ ಎಲ್ಲಾನೂ ಕಡಿಮಿ ರೊಕ್ಕದಾಗ ಸಿಗ್ತಾವ್ರಿ. ಹೊರಗ ಪ್ಯಾಟ್ಯಾಗ ಹೆಚ್ಗಿ ದುಡ್ಡು ಕೊಟ್ಟು ತೊಗೊಳ್ಳೋದಕ್ಕಿಂತ ಇಲ್ಲೇ ತಗೋರಿ ಎಂದು ಮಕ್ಕಳು ರಾಗವಾಗಿ ಕರೆಯುತ್ತಿದ್ದರೆ ಎಂಥವರಿಗಾರದೂ ಒಂದು ಕ್ಷಣ ಇಲ್ಲಿ ನಿಂತು ವ್ಯಾಪಾರ ಮಾಡಿ ಹೋಗಬೇಕು ಎನ್ನುವ ಮನಸ್ಸಾಗುತ್ತಿತ್ತು. ಶನಿವಾರ ಇಲ್ಲಿನ ಕೆಜಿಎಂಎಸ್ ಶಾಲೆಯಲ್ಲಿ ಮಕ್ಕಳು ಸಂತೆಯನ್ನು ಹಚ್ಚಿ ವ್ಯಾಪಾರ ಮಾಡುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು.
ಮಕ್ಕಳಿಗೆ ವ್ಯಾಪಾರ-ವಹಿವಾಟಿನ ಪ್ರತ್ಯಕ್ಷ ಅನುಭವ ನೀಡುವದರ ಜೊತೆಗೆ ಲಾಭ-ನಷ್ಟಗಳ ಪರಿಚಯವನ್ನು ಮಾಡಿಸಬೇಕೆನ್ನುವ ಶಿಕ್ಷಕರ ಪ್ರಾಯೋಗಿಕ ಚಟುವಟಿಕೆಯ ಸ್ವರೂಪವೇ ಈ ಮಕ್ಕಳ ಸಂತೆಯಾಗಿತ್ತು. ಹೂವು ಹೊರಗ ತಗೊಂಡ್ರ 20ರೂ.ಕ್ಕ ಮಳಾರಿ. ಆದ್ರ ಇಲ್ಲೆ ಬರೀ 15 ರೂಪಾಯಿಕ್ಕ ಮೊಳ ಕೊಡಾಕ ಹತ್ತೇನಿ ರ‍್ರಿ ಎಂದು ಕರೆಯುವ ಹೂವಾಡಗಿತ್ತಿಯ ಮಾತು ಎಲ್ಲರನ್ನೂ ಸೆಳೆಯುತ್ತಿತ್ತು.
ಬೆಂಡೆ, ಬದನೆ, ಚೌಳಿಕಾಯಿ, ಕರಿಬೇವು, ಕೋತಂಬರಿ, ಸೊಪ್ಪಿನ ಪಲ್ಯೆ, ಪಾನಿಪುರಿ ಹೀಗೆ ಸಂತೆಯಲ್ಲಿ ಏನೆಲ್ಲ ಸಿಗುತ್ತವೋ ಅವೆಲ್ಲವೂ ಈ ಮಕ್ಕಳ ಸಂತೆಯಲ್ಲಿದ್ದವು. ಬಂದಿದ್ದ ಪಾಲಕರೂ ಸಹ ನಿಜ ಸಂತೆಯಲ್ಲಿ ಹೇಗೆ ಚೌಕಾಸಿ ಮಾಡಿ ತೆಗೆದುಕೊಳ್ಳುತ್ತಾರೆಯೋ ಹಾಗೆಯೇ ಇಲ್ಲಿಯೂ ಸಹ ನಡೆದಿದ್ದ ಚೌಕಾಸಿ ಎಲ್ಲರ ಗಮನ ಸೆಳೆಯಿತು. ಚೌಕಾಸಿ ಮಾಡುವಾಗ ವಿದ್ಯಾರ್ಥಿಗಳು ತೋರಿದ ಬುದ್ಧಿಮತ್ತೆಯನ್ನು ಮೆಚ್ಚಲೇಬೇಕು. ನಿಜಕ್ಕೂ ನಮ್ಮ ವಿದ್ಯಾರ್ಥಿಗಳು ವ್ಯಾಪಾರ ವಹಿವಾಟಿನಲ್ಲಿ ಇಷ್ಟೊಂದು ಜಾಣರೆ? ಎಂದು ಅಚ್ಚರಿಪಡುವಷ್ಟು ಅವರು ವ್ಯಾಪಾರದಲ್ಲಿ ಮಗ್ನರಾಗಿದ್ದರು.
ಚಾಯ್ ಚಾಯ್ ಬರೀ ಐದು ರೂಪಾಯಿಗೊಂದು ಚಾಯ್. ಬಿಸಿಬಿಸಿ ಚಾಯ್. ಒಮ್ಮೆ ಕುಡುದ್ರ ಮತ್ತ ಕುಡೀಬೇಕೂ ಅನ್ಸೂ ಚಾಯ್ ರ‍್ರಿ ರ‍್ರಿ ಎಂದು ಕರೆಯುತ್ತಿದ್ದ ಚಾಯ್‌ವಾಲಾನ ಧ್ವನಿ ಎಲ್ಲೆಡೆ ಮಾರ್ದನಿಸುತ್ತಿತ್ತು. ಹಿರಿಯರನ್ನೂ ಮೀರಿಸುವಂತೆ ಮಕ್ಕಳು ಇಂದು ಸಂತೆ ನಡೆಸಿದ್ದನ್ನು ಕಂಡಾಗ ಮುಂದೊಂದು ದಿನ ಇವರು ಪಕ್ಕಾ ವ್ಯಾಪಾರಿಗಳಾಗುವುದರಲ್ಲಿ ಅನುಮಾನ ಇಲ್ಲವೆನ್ನಿಸಿತು.
ಮಕ್ಕಳ ಈ ಚಟುವಟಿಕೆಗೆ ಕಾರಣರಾದವರು ಮುಖ್ಯೋಪಾಧ್ಯಾಯ ಬಿ.ಬಿ. ಕುರಿ, ಎನ್.ಎಲ್. ಚವ್ಹಾಣ. ಎಸ್.ಐ. ಜಗಾಪೂರ, ಎಂ.ಪಿ. ಅಣಗೌಡ್ರ, ಡಿ.ವಿ. ಕಳ್ಳಿ, ಜಿ.ಎ. ಪಾಟೀಲ, ಎಂ.ಎಸ್. ಮಾಳಶೆಟ್ಟಿ, ರಾಜೇಶ್ವರಿ ತೊಂಡಿಹಾಳ, ಸಿಂಧು ಗುಡಿಸಾಗರ ಸಿಬ್ಬಂದಿಯವರು ಮತ್ತು ಇವರಿಗೆ ಪ್ರೋತ್ಸಾಹ ನೀಡಿದ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿಯವರು.
ಸಂತಿಗೆ ನಾನು ವಸ್ತುಗಳನ್ನ ತರಾಕ ಒಟ್ಟ 250ರೂ. ಖರ್ಚು ಮಾಡಿದ್ದಿನ್ರಿ. ಈಗ ನನ್ನ ಹತ್ರ ಒಟ್ಟ 375ರೂ ಅದಾವ್ರಿ ಎಂದು ಕಾಯಿಪಲ್ಲೆ ಮಾರಿದ ಹುಡುಗಿ ಹೇಳುವಾಗ ಅವಳ ಮೊಗದಲ್ಲಿ ತಾನು ಏನನ್ನೋ ಸಾಧಿಸಿದೆ ಎಂಬ ಭಾವವಿತ್ತು ಶಿಕ್ಷಕರ ಮೊಗದಲ್ಲಿ ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನಗಳೆರಡೂ ಯಶಸ್ವಿಯಾದ ಸಾರ್ಥಕತೆ ಇತ್ತು.