ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರು ಗ್ರಾಮದ ಶ್ರೀ ಗುರು ದಿಂಗಾಲೇಶ್ವರ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಬಹುತೇಕ ಹಾಳಾಗಿದ್ದು, ಇಂತಹ ಕಟ್ಟಡದಲ್ಲಿಯೇ ಒಟ್ಟು 380 ಮಕ್ಕಳು ಕಲಿಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಸಮಸ್ಯೆ ಹತ್ತಾರು ವರ್ಷಗಳದ್ದಾದರೂ ಇಲಾಖೆ, ಜನಪ್ರತಿನಿಧಿಗಳು ಈ ಕುರಿತು ಕ್ರಮ ಕೈಗೊಳ್ಳದಿರುವದು ಪಾಲಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ತಾಲೂಕಿನ ಕೊನೆಯ ಗ್ರಾಮ ಬಾಲೆಹೊಸೂರ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದೆ. 1ರಿಂದ 7ನೇ ತರಗತಿಯವರೆಗೂ ಒಟ್ಟು 380 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲಾ ಕಟ್ಟಡದಲ್ಲಿ ಒಟ್ಟು 14 ಕೊಠಡಿಗಳಿವೆ. ಅದರಲ್ಲಿ 8 ಕೊಠಡಿಗಳು ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿವೆ. 8 ಕೊಠಡಿಗಳು ಡೆಮಾಲೆಷನ್ ಹಂತಕ್ಕೆ ಬಂದಿದ್ದು, ಅಲ್ಲಿ ಮಕ್ಕಳು ಓಡಾಡುವುದೂ ಅಪಾಯಕಾರಿ. ಉಳಿದ 4 ಕೊಠಡಿಗಳಲ್ಲಿಯೇ 380 ಮಕ್ಕಳು ಕಲಿಯುವ ಅನಿವಾರ್ಯತೆಯಿದೆ. ಒಂದೇ ಕೊಠಡಿಯಲ್ಲಿ 4ರಿಂದ 7ನೇ ವರ್ಗಗಳು, ಉಳಿದ ಕೊಠಡಿಯಲ್ಲಿ 1ರಿಂದ 3ನೇ ವರ್ಗದ ನಲಿ-ಕಲಿ ಮಕ್ಕಳು ಕಲಿಯುವಂತಾಗಿದೆ.
ಇದರಲ್ಲಿಯೇ ಮುಖ್ಯೋಪಾಧ್ಯಾಯರ ಕಛೇರಿ, ಶಿಕ್ಷಕರ ಕೊಠಡಿ, ಅಡುಗೆ ಕೋಣೆ ಎಲ್ಲವೂ ಸೇರಿವೆ. ಒಂದೊಂದು ಬೆಂಚ್ ಮೇಲೆ ನಾಲ್ಕು ಮಕ್ಕಳು ಕುಳಿತುಕೊಳ್ಳುವದು ಹಾಗೂ ಇನ್ನುಳಿದ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವ ದುಸ್ಥಿತಿ ಇಲ್ಲಿದೆ. ಈ ಕೊಠಡಿಗಳು ಸಹ ಮಳೆ ಬಂದಾಗ ಸೋರುತ್ತಿರುವದರಿಂದ ಇಕ್ಕಟ್ಟಾದ ಜಾಗೆಯಲ್ಲಿಯೇ ಕುಳಿತು ಕಲಿಯುವಂತಾಗಿದೆ.
ಶಾಲೆಯಲ್ಲಿ ಶಿಥಿಲಗೊಂಡಿರುವ ಕಟ್ಟಡ ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಎರಡು ಕೊಠಡಿಗಳು ವಿವೇಕ ಯೋಜನೆಯಲ್ಲಿ ಮಂಜೂರಾಗಿದ್ದು, ಲೋಕೋಪಯೋಗಿ ಇಲಾಖೆಯ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಜಿ.ಪಂದಿAದ 5 ಲಕ್ಷ ಕ್ರಿಯಾಯೋಜನೆ ಅನುಮೋದನೆಗಿದೆ. ತಾ.ಪಂನಲ್ಲಿ ಕ್ರಿಯಾಯೋಜನೆ ಅಳವಡಿಸಲು ಮನವಿ ಸಲ್ಲಿಸಲಾಗಿದೆ. ಅಲ್ಲದೆ ದುರಸ್ತಿಗಾಗಿ ರಾಜ್ಯ ಕಚೇರಿಗೆ 14 ಲಕ್ಷ ರೂಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಟೆಂಡರ್ ಕರೆದು ಕಟ್ಟಡ ನಿರ್ಮಾಣ ಕಾರ್ಯಾರಂಭ ಮಾಡುತ್ತೇವೆ. ಶಿಕ್ಷಕರ ಕೊರತೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಡಿಪಿಐ ಆರ್.ಎಸ್.ಬುರಡಿ ಭರವಸೆ ನೀಡಿದ್ದಾರೆ.
ಬಾಲೇಹೊಸೂರು ಗ್ರಾಮದ ಸರಕಾರಿ ಶಾಲೆಯ ಸಮಸ್ಯೆಗಳ ಕುರಿತಂತೆ ಶಿಕ್ಷಣ ಇಲಾಖೆಗೆ ಗ್ರಾಮದ ಶಿಕ್ಷಣ ಪ್ರೇಮಿಗಳು ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಶಿಥಿಲ ಕಟ್ಟಡವನ್ನು ತೆರವು ಮಾಡದಿರುವದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಶಿಕ್ಷಕರ ಕೊರತೆಯೂ ಇದ್ದು, ಇಲಾಖೆ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ಮಕ್ಕಳ ಶಿಕ್ಷಣಕ್ಕೆ ಅನೂಕೂಲ ಮಾಡಿಕೊಡಬೇಕು.
– ಶರಣಪ್ಪ ಮರಳಹಳ್ಳಿ.
ಎಸ್‌ಡಿಎಂಸಿ ಅಧ್ಯಕ್ಷರು.


