ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿಯ ನಿರಂತರ ಪ್ರಕಾಶನ ಹಾಗೂ ನಿವೃತ್ತ ಶಿಕ್ಷಕರಾದ ಎಸ್.ಎಮ್. ಕಟ್ಟಿಮನಿ ಅಭಿಮಾನಿಗಳ ಬಳಗವು ಇಲ್ಲಿಯ ವಿವೇಕಾನಂದ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿ ಹಾಗೂ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಬಾಲಕವಯಿತ್ರಿ ಪ್ರಣತಿ ರಾಜೇಂದ್ರ ಗಡಾದ ಅವರ ಸನ್ಮಾನ ಸಮಾರಂಭ ಯಶಸ್ವಿಯಾಗಿ ಜರುಗಿತು.
ಹಿರಿಯ ಮಕ್ಕಳ ಸಾಹಿತಿ ಡಾ. ರಾಜೇಂದ್ರ ಎಸ್.ಗಡಾದ, ನೂರ್ ಅಹಮದ್ ನಾಗನೂರ, ಆದಿ, ವಿಶ್ವನಾಥ್ ಕಮ್ಮಾರ್ ಕವಯಿತ್ರಿಯರಾದ ನೀಲಮ್ಮ ಅಂಗಡಿ, ಶಿಲ್ಪಾ ಮ್ಯಾಗೇರಿ, ಅಂಜನಾ ಕರಿಯಲ್ಲಪ್ಪನವರ, ಭಾಗ್ಯಶ್ರೀ ಹುರಕಡ್ಲಿ, ಅನ್ನಪೂರ್ಣ ಕೊಟಗಿ, ಸುಧಾ ಬೆನಕಲ್ ಮೊದಲಾದವರು ಕವಿತೆಗಳನ್ನು ವಾಚಿಸಿದರು. ಪ್ರಣತಿ ರಾಜೇಂದ್ರ ಗಡಾದ ಇಂದಿನ ಮಕ್ಕಳು ಎದುರಿಸುತ್ತಿರುವ ವೈರುಧ್ಯಗಳು ಕುರಿತು ಓದಿದ ಮಕ್ಕಳ ಕವಿತೆ ಹಾಗೂ ಗೋವರ್ಧನ್ ಬಡಿಗೇರ ವಾಚಿಸಿದ ಕವಿತೆಗಳು ಗಮನ ಸೆಳೆದವು.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿಯವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಹರ ಗ್ರಾಮೀಣ ಘಟಕದ ಶಿಕ್ಷಣಾಧಿಕಾರಿಗಳಾದ ವಿ.ವಿ. ನಡುವಿನಮನಿ, ಜಿಲ್ಲಾ ಡಯಟ್ ಉಪನ್ಯಾಸಕರಾದ ಸುಧಾ ಬೆನಕಲ್, ಶಿಕ್ಷಣಾಧಿಕಾರಿಗಳಾದ ಶಿವಕುಮಾರ ಕುರಿ, ಮುಖ್ಯೋಪಾಧ್ಯಾಯ ಬಿ.ಡಿ. ಮಾದರ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ರಾಜ್ಯದ ಏಕೈಕ ಚಿಗುರು ಅತಿಥಿಯಾಗಿ ಪಾಲ್ಗೊಂಡು ಗದಗಿನ ಕೀರ್ತಿ ಹೆಚ್ಚಿಸಿದ ಪ್ರಣತಿ ರಾಜೇಂದ್ರ ಗಡಾದರನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ಎಸ್.ಎಂ. ಕಟ್ಟಿಮನಿ ಸ್ವಾಗತಿಸಿದರು. ಕವಿ ವಿಶ್ವನಾಥ ಕಮ್ಮಾರ್ ಕಾರ್ಯಕ್ರಮ ನಿರೂಪಿಸಿದರು. ಎಲ್.ಬಿ. ಕುನ್ನಿಬಾವಿ ವಂದಿಸಿದರು. ವೇದಿಕೆ ಮೇಲೆ ನಿವೃತ್ತ ಶಿಕ್ಷಣಾಧಿಕಾರಿಗಳಾದ ಎಸ್.ಐ. ಯಾಳಗಿ, ನಗರ ಅಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾದ ಬಿ.ಎನ್. ಯರನಾಳ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರಾಜೇಂದ್ರ ಎಸ್.ಗಡಾದ ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಕವಿ ಎ.ಎಸ್. ಮಕಾನದಾರ, ಬದುಕಿನ ಬಗ್ಗೆ ಪ್ರೀತಿ ಇಲ್ಲದವರಿಗೆ ಕವಿತೆ ಬರೆಯುವ ಹಕ್ಕು ಇಲ್ಲ. ಬದುಕನ್ನು ಪ್ರೀತಿಸದವ, ಸಮಾಜವನ್ನು ಪ್ರೀತಿಸದವ, ಮಾನವೀಯತೆಯನ್ನು ಆರಾಧಿಸದವ ಕವಿಯಾಗಲಾರ ಎಂದರು.