ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮೊದಮೊದಲು ಮುಂಗಾರು ಮಳೆ ಕೊರತೆಯಿಂದ ಮೆಣಸಿನಕಾಯಿ ಬೆಳೆ ಕುಂಠಿತಗೊAಡಿದ್ದು, ಈ ಬೆಳೆಯು ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಮಧ್ಯ ಬರುವುದರಿಂದ ಹಿಂಗಾರು ಹಂಗಾಮಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ರೋಗಕ್ಕೆ ತುತ್ತಾಗಿ ಕೊಳೆತು ಹೋಗಿದೆ. ಅಳಿದುಳಿದ ಬೆಳಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ರೈತರು ಆತಂಕದಲ್ಲಿದ್ದಾರೆ.
ಗದಗ ತಾಲೂಕಿನ ತಿಮ್ಮಾಪೂರ, ಹರ್ಲಾಪೂರ, ಲಕ್ಕುಂಡಿ, ಕೋಟುಉಮಚಗಿ, ಹಾತಲಗೇರಿ, ಕಣಗಿನಹಾಳ ಗ್ರಾಮಗಳಲ್ಲಿ ಅತಿ ಹೆಚ್ಚು ಎರೆಭೂಮಿಯನ್ನು ಹೊಂದಿರುವುದರಿಂದ ಇಲ್ಲಿ ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಅಳಿದುಳಿದಿರುವ ಮೆಣಸಿನಕಾಯಿಯನ್ನು ಬ್ಯಾಡಗಿ, ಹುಬ್ಬಳ್ಳಿ, ಗದಗ ಮಾರುಕಟ್ಟೆಗೆ ಒಯ್ದಾಗ ಕ್ವಿಂಟಲ್‌ಗೆ 20 ಸಾವಿರ ರೂ.ನಿಂದ 25 ಸಾವಿರ ರೂ.ವರೆಗೆ ಮಾತ್ರ ದರ ಇದೆ. ಕಳೆದ ವರ್ಷ ಗರಿಷ್ಠ 75 ಸಾವಿರ ರೂ/ಕ್ವಿಂಟಲ್‌ಗೆ ಮಾರಾಟವಾಗಿತ್ತು.
ಜಿಲ್ಲಾಡಳಿತ ಈ ಹಿಂದೆ ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿ ಸರ್ವೆ ಮಾಡಿಸಿಕೊಂಡು ವರದಿಯನ್ನು ಪಡೆದರೂ ಸಹ ರೈತರಿಗೆ ಯಾವುದೇ ಬೆಳೆ ಹಾನಿ ಪರಿಹಾರ ಸಿಕ್ಕಿಲ್ಲ ಎಂಬುದು ರೈತರ ಅಳಲು.
ಪೂರ್ಣ ಪ್ರಮಾಣದ ಪರಿಹಾರದ ಹಣವನ್ನು ಹಾಗೂ ಬೆಳೆ ವಿಮೆ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಶೀಘ್ರವೇ ಜಮಾ ಮಾಡಬೇಕೆಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಆಗ್ರಹಿಸಿದ್ದಾರೆ.