ಬೆಂಗಳೂರು:- ಚೊಚ್ಚಲ ಟ್ರೋಫಿ ಗೆದ್ದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ನಗರದಲ್ಲಿ ಏರ್ಪಡಿಸಿದ್ದ ವಿಜಯೋತ್ಸವ ವೇಳೆ ಸುಮಾರು 11 ಮಂದಿ ಆರ್ ಸಿಬಿ ಅಭಿಮಾನಿಗಳು ಅಸುನೀಗಿದರು.
ಈ ಹಿನ್ನೆಲೆ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹಾಲಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಸಂಬಂಧ ಆರ್‌ಸಿಬಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಜೂ.4 2025ರ ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ, ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು. ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಶಕ್ತಿ. ಅದು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು.
ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಜಾಗವನ್ನು ಯಾವ ಸಹಾಯವೂ ತುಂಬಲಾರದು. ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂ. ನೆರವು ನೀಡುತ್ತಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ, ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆಯಾಗಿದೆ ಎಂದು RCB ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದೆ.