ಬೆಂಗಳೂರು:- ಚಿನ್ನಸ್ವಾಮಿ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚಿನ್ನಸ್ವಾಮಿ ಕಾಲ್ತುಳಿತ ದುರಂತ ಸಂಬಂಧ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ಸರ್ಕಾರ 52 ದಿನಗಳ ನಂತರ ಹಿಂದಕ್ಕೆ ಪಡೆದಿದೆ. ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ ಒಬ್ಬರನ್ನು ಬಿಟ್ಟು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಡಿಸಿಪಿ ಶೇಖರ್, ಎಸಿಪಿ ಎಚ್.ಟಿ.ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್ ಗಿರೀಶ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆದ ಕಾರಣ ಬೆಂಗಳೂರಿನಲ್ಲಿ ಜುಲೈ 4 ರಂದು ಆಯೋಜಿಸಲಾಗಿದ್ದ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 11 ಜನರು ಮೃತಪಟ್ಟಿದ್ದರು. ಈ ಸಂಬಂಧ ರಾಜ್ಯ ಸರ್ಕಾರ, ಐವರು ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡಿ ಅವರನ್ನು ಅಮಾನತು ಮಾಡಿತ್ತು. ಇದಕ್ಕೆ ಭಾರೀ ಟೀಕೆಗಳು, ಖಂಡನೆಗಳು ವ್ಯಕ್ತವಾಗಿದ್ದವು. ಆದ್ರೆ, ಇದೀಗ ಅದೇನಾಯ್ತೋ ಏನೋ ರಾಜ್ಯ ಸರ್ಕಾರವೇ ಯುಟರ್ನ್ ಹೊಡೆದಿದ್ದು, ತಾನೇ ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದೀಗ ದಿಢೀರ್ ಅಮಾನತು ಆದೇಶ ಹಿಂಪಡೆದುಕೊಂಡಿರುವುದು ಅಚ್ಚರಿ ಹಾಗೂ ಚರ್ಚೆಗೆ ಗ್ರಾಸವಾಗಿದೆ.