ಬೆಂಗಳೂರು: ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ಮಹಿಳೆಯೊಬ್ಬರಿಂದ ಅತಿರೇಕದ ಪ್ರೇಮ ಕಾಟ ಎದುರಾಗಿದೆ.
‘‘Chinni love u… u must love me’’ ಎಂದು ನಿರಂತರವಾಗಿ ಸಂದೇಶಗಳು, ಕರೆಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದ ಮಹಿಳೆ, ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಆರೋಪಿಸಲಾಗಿದೆ. ತಾನು ಕಾಂಗ್ರೆಸ್ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದ ಮಹಿಳೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಪರಿಚಯವಿದೆ ಎಂದು ಹೇಳಿ, ರಾಜಕೀಯ ನಾಯಕರೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ಕಳುಹಿಸಿ ಇನ್ಸ್‌ಪೆಕ್ಟರ್ ಮೇಲೆ ಒತ್ತಡ ಹೇರಿದ್ದಾಳೆ ಎನ್ನಲಾಗಿದೆ.
ಮಹಿಳೆಯ ಕಾಟ ಇಷ್ಟರ ಮಟ್ಟಿಗೆ ಹೋಗಿತ್ತು ಎಂದರೆ, ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇಲ್ಲದ ಸಮಯದಲ್ಲಿ ಕಜ್ಜಾಯದ ಡಬ್ಬಿ ಹಾಗೂ ಹೂಗುಚ್ಛವನ್ನು ಠಾಣೆಗೆ ತಂದು ಇಟ್ಟಿದ್ದಾಳೆ. ಅಲ್ಲದೆ, 11 ವಿಭಿನ್ನ ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಮಾಡಿ ಪ್ರೀತಿ ನಿವೇದನೆ ಮಾಡುತ್ತಿದ್ದ ಕಾರಣ, ಇನ್ಸ್‌ಪೆಕ್ಟರ್ ಎಲ್ಲಾ ಸಂಖ್ಯೆಗಳನ್ನೂ ಬ್ಲಾಕ್ ಮಾಡಿದ್ದರು. ಆದರೂ ಕಾಟ ನಿಲ್ಲದೇ, ಲವ್ ಲೆಟರ್ ಜೊತೆಗೆ ‘Nexito Plus’ ಮಾತ್ರೆಯನ್ನು ಕಳುಹಿಸಿ, ‘‘ನನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’’ ಎಂದು ಬರೆದ ಪತ್ರವನ್ನು ಠಾಣೆಗೆ ಪೋಸ್ಟ್ ಮಾಡಿದ್ದಾಳೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇದರ ನಡುವೆ ಮಹಿಳೆ ದೂರು ನೀಡಲು ಬಂದಿರುವುದಾಗಿ ಗೃಹ ಸಚಿವರ ಕಚೇರಿಯಿಂದ ಕರೆ ಬಂದಿದೆ ಎನ್ನಲಾಗಿದ್ದರೂ, ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಇನ್ಸ್‌ಪೆಕ್ಟರ್ ಸ್ಪಷ್ಟಪಡಿಸಿದ್ದಾರೆ. ಕೊನೆಗೆ ನಿರಂತರ ಕಾಟದಿಂದ ಬೇಸತ್ತ ಇನ್ಸ್‌ಪೆಕ್ಟರ್ ಸತೀಶ್, ಕರ್ತವ್ಯಕ್ಕೆ ಅಡ್ಡಿಪಡಿಸಿದುದು ಹಾಗೂ ಆತ್ಮಹತ್ಯೆ ಬೆದರಿಕೆ ಆರೋಪದಡಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



