ವಿಜಯಸಾಕ್ಷಿ ಸುದ್ದಿ, ನರಗುಂದ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ರಾಷ್ಟç ಮಟ್ಟದ ಮಹಿಳಾ ಕಬ್ಬಡಿ ಕ್ರೀಡಾಪಟುಗಳು ಭಾಗವಹಿಸಿ ನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಿದರು.
ಚುನಾವಣೆ ರಾಯಭಾರಿಗಳಂತೆ ಮತದಾನ ಜಾಗೃತಿ ಕಾರ್ಯದಲ್ಲಿ ಕಲಕೇರಿ ಗ್ರಾಮದ ರಾಷ್ಟçಮಟ್ಟದ ಕಬ್ಬಡಿ ಮಹಿಳಾ ಕ್ರೀಡಾಪಟುಗಳಾದ ಪ್ರೇಮಾ ಪಾಟೀಲ್, ನಿರ್ಮಲಾ ಪರಮೇಶ್ವರ್ ಮತ್ತು ಮೇಘಾ ಮಳ್ಳಸಿದ್ಧನವರ ಅವರು ಭಾಗವಹಿಸಿ ಕೂಲಿಕಾರರಿಗೆ ಮತದಾನದ ಬಗ್ಗೆ ತಿಳಿಹೇಳಿದರು.
ಈ ವೇಳೆ ರಾಷ್ಟçಮಟ್ಟದ ಅಂಡರ್ 20 ಜೂನಿಯರ್ ಕಬ್ಬಡಿ ಕ್ರೀಡಾಪಟು ಪ್ರೇಮಾ ಪಾಟೀಲ್ ಮಾತನಾಡಿ, ಮೊದಲ ಬಾರಿಗೆ ನಾನು ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮತದಾನ ಮಾಡುತ್ತಿದ್ದೇನೆ. ಮತದಾನ ಮಾಡುತ್ತಿರುವುದು ಖುಷಿಯ ಸಂಗತಿ ಎನಿಸಿದೆ. ಯಾವುದೇ ಮತದಾರರು ಜಾತಿ, ಆಮಿಷಕ್ಕೆ ಒಳಗಾಗದೇ ಸ್ವಂತ ಬುದ್ಧಿಯಿಂದ ಆಲೋಚಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಕೂಲಿಕಾರರು ಮೇ 7ರಂದು ಯಾವುದೇ ಕೆಲಸಕ್ಕೆ ತೆರಳದೇ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದರು.
ರಾಷ್ಟçಮಟ್ಟದ ಅಂಡರ್ 19 ಸ್ಕೂಲ್ ಗೇಮ್ ಕಬ್ಬಡಿ ಕ್ರೀಡಾಪಟು ನಿರ್ಮಲಾ ಪರಮೇಶ್ವರ ಮಾತನಾಡಿ, ನಮ್ಮೂರಲ್ಲೇ ಎಲ್ಲ ಕೂಲಿಕಾರರಿಗೆ ಪಂಚಾಯತ ವತಿಯಿಂದ ಕೆಲಸ ನೀಡುತ್ತಿದ್ದಾರೆ. ಬೇಸಿಗೆ ಇದೆ, ಹೊಲದಲ್ಲಿ ಕೆಲಸ ಇಲ್ಲ ಎಂಬ ಚಿಂತೆ ದೂರವಾಗಿದೆ. ಹೀಗಾಗಿ ಬೇಸಿಗೆ ಮುಗಿಯುವರೆಗೂ ನರೇಗಾ ಕಾಮಗಾರಿ ಕೆಲಸ ಮಾಡಿ ಮೇ 7ರಂದು ಕಡ್ಡಾಯವಾಗಿ ಮತದಾನ ಮಾಡೋಣ ಎಂದರು.
ಸ್ವತಃ ಕ್ರೀಡಾಪಟು ಮೇಘಾ ಮಳ್ಳಸಿದ್ಧನವರ ಅವರು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಕೂಲಿಕಾರರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದರ್, ಹುಣಶೀಕಟ್ಟಿ ಗ್ರಾ.ಪಂ ಅಧಿಕಾರಿ ವಿ.ಆರ್. ರಾಯನಗೌಡರ, ಐಇಸಿ ಸಂಯೋಜಕ ಸುರೇಶ್ ಬಾಳಿಕಾಯಿ, ಬಿಎಫ್‌ಟಿ ಬಸವರಾಜ ಚಿಮ್ಮನಕಟ್ಟಿ, ನರೇಗಾ ಸಿಬ್ಬಂದಿ ಮತ್ತು ಹುಣಶಿಕಟ್ಟಿ ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.