ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖದೀಮರ ಅಟ್ಟಹಾಸ ಮಿತಿಮೀರಿದ್ದು, ಬನ್ನೇರುಘಟ್ಟ ಸಮೀಪ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣ ನಗರವನ್ನೇ ಬೆಚ್ಚಿಬೀಳಿಸಿದೆ. ಬೈಕ್ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ 31 ಲಕ್ಷ 38 ಸಾವಿರ 625 ರೂಪಾಯಿ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.
ಕೈಲಾಸ್ ಎಂಬ ಯುವಕ ರಾಕೇಶ್ ಎಂಬುವವರ ಬಳಿ ಕ್ಯಾಶ್ ಕಲೆಕ್ಟಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಉಡಾನ್ (Udaan) ಕಂಪನಿಯ ವಿವಿಧ ಬ್ರಾಂಚ್ಗಳಿಗೆ ಭೇಟಿ ನೀಡಿ ಹಣ ಸಂಗ್ರಹಿಸುವುದು ಈತನ ಕೆಲಸವಾಗಿತ್ತು. ಎಂದಿನಂತೆ ಭಾನುವಾರ ಸಂಜೆ ಕೈಲಾಸ್ ವಿವಿಧ ಬ್ರಾಂಚ್ಗಳಿಂದ ಒಟ್ಟು ₹31,38,625 ಹಣವನ್ನು ಕಲೆಕ್ಟ್ ಮಾಡಿದ್ದ.
ಸಂಗ್ರಹಿಸಿದ ಈ ಬೃಹತ್ ಮೊತ್ತದ ಹಣವನ್ನು ಕೈಲಾಸ್ ತನ್ನ ಜುಪಿಟರ್ ಸ್ಕೂಟರ್ನ ಡಿಕ್ಕಿಯಲ್ಲಿಟ್ಟು, ಬನ್ನೇರುಘಟ್ಟ ಸಮೀಪದ ಸಕಲವಾರ ರಸ್ತೆಯಲ್ಲಿ ಸಂಚರಿಸುತ್ತಿದ್ದ. ಸಂಜೆ ಸುಮಾರು 4:20ರ ವೇಳೆಗೆ ಸಕಲವಾರ ರಸ್ತೆಯಿಂದ ಬನ್ನೇರುಘಟ್ಟದ ಕಡೆಗೆ ಬರುತ್ತಿದ್ದಾಗ ದರೋಡೆ ನಡೆದಿದೆ.
ಎರಡು ಬೈಕ್ಗಳಲ್ಲಿ ಬೆನ್ನಟ್ಟಿಕೊಂಡು ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಕೈಲಾಸ್ನನ್ನು ಅಡ್ಡಗಟ್ಟಿದ್ದಾರೆ. ಕೈಯಲ್ಲಿದ್ದ ಲಾಂಗ್ (Long) ತೋರಿಸಿ ಬೆದರಿಸಿದ ದರೋಡೆಕೋರರು, ಯುವಕನ ಮೇಲೆ ಹಲ್ಲೆಗೆ ಮುಂದಾಗಿ, ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ.
ದರೋಡೆ ಮಾಡಿದ ಗ್ಯಾಂಗ್ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಕೈಲಾಸ್ನ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದು, ನಂತರ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ, ಡಿಕ್ಕಿಯಲ್ಲಿದ್ದ ₹31 ಲಕ್ಷಕ್ಕೂ ಅಧಿಕ ಹಣವನ್ನು ತೆಗೆದುಕೊಂಡು ಖಾಲಿ ಬೈಕನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ದರೋಡೆ ಪ್ರಕರಣ ದಾಖಲಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.



