ಮಂಡ್ಯ: ಚಿನ್ನದಂಗಡಿ ಮೇಲೆ ಆ್ಯಸಿಡ್ ದಾಳಿ ಮಾಡಿ ಕೋಟ್ಯಂತರ ಮೌಲ್ಯದ ಚಿನ್ನ-ಬೆಳ್ಳಿ ದರೋಡೆ ನಡೆದ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಸತ್ಯ ಹೊರಬಂದಿದ್ದು, ದರೋಡೆ ನಾಟಕವನ್ನೇ ರೂಪಿಸಿದ್ದವರು ಅಂಗಡಿ ಮಾಲೀಕ ಜಿತೇಂದ್ರ ಸಿಂಗ್ ಎಂಬುದು ಬೆಳಕಿಗೆ ಬಂದಿದೆ.
ರಾಜಸ್ಥಾನ ಮೂಲದ ಜಿತೇಂದ್ರ, ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮಹಾಲಕ್ಷ್ಮಿ ಜುವೆಲರಿ ನಡೆಸುತ್ತಿದ್ದ. ದುಷ್ಕರ್ಮಿಗಳು ತನ್ನ ಮುಖಕ್ಕೆ ಆ್ಯಸಿಡ್ ಎರಚಿ 170 ಗ್ರಾಂ ಚಿನ್ನ ಹಾಗೂ 8 ಕೆಜಿ ಬೆಳ್ಳಿ ಕದ್ದೊಯ್ದಿದ್ದಾರೆ ಎಂದು ದೂರು ನೀಡಿದ್ದ. ಆದರೆ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿರುವುದು, ಮುಖದ ಗಾಯಗಳ ಸ್ವರೂಪ ಮತ್ತು ಘಟನಾ ಸ್ಥಳದಲ್ಲಿ ಸಾಕ್ಷ್ಯಗಳ ಕೊರತೆ ಪೊಲೀಸರ ಅನುಮಾನಕ್ಕೆ ಕಾರಣವಾಯಿತು.
ಪರಿಶೀಲನೆ ವೇಳೆ ಜಿತೇಂದ್ರ ತನ್ನ ಮುಖಕ್ಕೆ ಆ್ಯಸಿಡ್ ಅಲ್ಲ, ಚಿನ್ನಕ್ಕೆ ಬಳಸುವ ರಾಸಾಯನಿಕವನ್ನು ಹಚ್ಚಿಕೊಂಡಿರುವುದು ಗೊತ್ತಾಯಿತು. ನಾಪತ್ತೆಯಾದ ಡಿವಿಆರ್ ಕೆರೆಯಲ್ಲಿ ಪತ್ತೆಯಾಯಿತು. ವಿಚಾರಣೆ ಕಠಿಣಗೊಳಿಸಿದಾಗ ಜಿತೇಂದ್ರ ಸಾಲದ ಒತ್ತಡದಿಂದ ದರೋಡೆ ನಾಟಕ ರೂಪಿಸಿದ್ದಾನೆ ಎಂಬುದು ಬಹಿರಂಗವಾಯಿತು.
ಸಾಲ ತೀರಿಸಲು ಮತ್ತು ಅಡವಿಟ್ಟಿದ್ದ ಒಡವೆಗಳ ವಿಚಾರದಲ್ಲಿ ಜನರನ್ನು ಯಾಮಾರಿಸಲು ಈ ಸಂಪೂರ್ಣ ಕಥೆ ರೂಪಿಸಿದ್ದಾನೆ. ಅಂಗಡಿಯ ಚಿನ್ನ-ಬೆಳ್ಳಿಯನ್ನು ಸ್ನೇಹಿತನ ಬಳಿ ಇಟ್ಟು, ಬಳಿಕ ರಾಜಸ್ಥಾನಕ್ಕೆ ತೆರಳುವ ಯೋಜನೆಯೂ ಸಿದ್ಧವಾಗಿತ್ತು. ಆದರೆ ಪೊಲೀಸರ ಸೂಕ್ಷ್ಮ ತನಿಖೆಯಿಂದ ನಾಟಕ ಪತ್ತೆಯಾಗಿ, ಜಿತೇಂದ್ರ ಬಂಧನಕ್ಕೊಳಗಾಗಿದ್ದಾನೆ.
ಸಿನಿಮಾ ಕಥೆಯನ್ನು ಮೀರಿಸಿದ ಈ ದರೋಡೆ ಡ್ರಾಮಾ ಇದೀಗ ಪೊಲೀಸರ ಕೈಯಲ್ಲಿ ಮುಗಿದಿದೆ.



