ವಿಜಯಸಾಕ್ಷಿ ಸುದ್ದಿ, ಗದಗ: ನಾಡ ಕಚೇರಿ ಮತ್ತು ಉಪತಹಸೀಲ್ದಾರ ಕಚೇರಿಗಳು ಸರ್ಕಾರ ಮತ್ತು ಜನರ ನಡುವೆ ಸೇತುವೆಯಂತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದ ನಾಡಿ ಎನ್ನುವಂತೆ ಕೆಲಸ ಮಾಡುತ್ತಿರುವ ಈ ಕಚೇರಿಗಳು ಜನರ ಜೀವನಕ್ಕೆ ನೇರ ಸಂಪರ್ಕ ಹೊಂದಿಬೇಕು. ಜನರ ಬಾಗಿಲಿಗೆ ಸೇವೆ ಎಂಬ ಸರ್ಕಾರದ ಧ್ಯೇಯವನ್ನು ಸಾಕಾರಗೊಳಿಸುತ್ತಿರುವ ಪ್ರಮುಖ ಕೇಂದ್ರವೇ ನಾಡ ಕಚೇರಿ. ನಾಡ ಕಚೇರಿಗಳಲ್ಲಿ ಈಗ ಅನೇಕ ಸೇವೆಗಳು ಒಂದೇ ಸೂರಿನಡಿ ದೊರೆಯುತ್ತಿವೆ ಎಂದು ಜನರು ನಂಬಿದ್ದಾರೆ. ಆದರೆ, ಅದಕ್ಕೆ ಅಪವಾದ ಎನ್ನುವಂತೆ ಇಲ್ಲೊಂದು ನಾಡ ಕಛೇರಿ ಸ್ವಂತ ಕಟ್ಟಡ, ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಹೆಸರಿಗೆ ಮಾತ್ರ ಎನ್ನಾಗಿದೆ.
ಗಜೇಂದ್ರಗಡ ತಾಲೂಕಿನ ನರೇಗಲ್ಲ ಹೋಬಳಿಯಲ್ಲಿ ನಾಡ ಕಚೇರಿ ಇದ್ದರೂ, ಕಾರ್ಯಕ್ಷಮತೆಯಲ್ಲಿ ಅದು ಇದ್ದೂ ಇಲ್ಲದಂತಾಗಿದೆ. `ಆಧಾರ್ ಕಾರ್ಡ್ ಸ್ಥಗಿತ’ ಎಂಬ ಸಣ್ಣ ತಾಂತ್ರಿಕ ತೊಂದರೆಯು ಇಡೀ ಗ್ರಾಮೀಣ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅನೇಕ ಬಡ ಕುಟುಂಬಗಳು ಸರ್ಕಾರದ ಹಲವು ಯೋಜನೆಗಳಿಂದ ವಂಚಿತರಾಗುತ್ತಿದ್ದು, ನರೇಗಲ್ಲ ನಾಡ ಕಚೇರಿಯಲ್ಲಿ ಈಗ ಸೇವೆ ಮರೀಚಿಕೆ ಎನ್ನಾಗಿದೆ.
ಈ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಅಧಿಕ ಗ್ರಾಮಗಳು ಬರುತ್ತಿದ್ದರೂ, ಸ್ವಂತ ಸೂರು ಇಲ್ಲದೆ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಸದ್ಯ ಅಟಲ್ ಜೀ ಗಣಕಯಂತ್ರ ನಿರ್ವಾಹಕನೇ ಎಲ್ಲಾ ಕಾರ್ಯವನ್ನು ಮಾಡುವ ಪ್ರಸಂಗ ಎದುರಾಗಿದೆ. ಇದರಿಂದ ಒಂದು ನೂರು ರೂಪಾಯಿಗಳಲ್ಲಿ ಆಗುವ ಕಾರ್ಯಕ್ಕೂ ಬೇರೆ ಪಟ್ಟಣ, ನಗರಗಳಿಗೆ ಹೋಗಿ ಮಾಡಿಸಲು ಸಾವಿರಾರು ರೂಪಾಯಿಗಳ ಖರ್ಚು ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ನಾಡ ಕಚೇರಿ ಕಟ್ಟಡದ ಬೇಡಿಕೆ ವರ್ಷಗಳಿಂದ ಬಾಕಿಯೇ ಉಳಿದಿದೆ. ಕುಡಿಯಲು ನೀರಿಲ್ಲ, ಕುಳಿತುಕೊಳ್ಳಲು ಆಸನವಿಲ್ಲ, ಸ್ವಚ್ಛ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲೂ ಅಧಿಕಾರಿಗಳು ಜನರ ದಾಖಲೆ ಪರಿಶೀಲನೆ, ಯೋಜನೆ ಕೆಲಸಗಳನ್ನು ಹೇಗೆ ಮಾಡುತ್ತಾರೆ ಎಂದು ಜನರ ನೊಂದ ಮನಸ್ಸು ಈಗ ಪ್ರಶ್ನಿಸುತ್ತದೆ.
ನಾಡ ಕಚೇರಿ ಎಂದರೆ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೇಂದ್ರವಾಗಬೇಕು. ಆದರೆ ನರೇಗಲ್ಲದಲ್ಲಿ ಅದು ಕೇವಲ ಹೆಸರು ಮಾತ್ರ. ಒಬ್ಬನೇ ಗಣಕ ನಿರ್ವಾಹಕ ಇಡೀ 40ಕ್ಕೂ ಅಧಿಕ ಹಳ್ಳಿಗಳ ದಾಖಲೆ ಮತ್ತು ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತಿದ್ದಾನೆ. ಅದು ಸಹ ತಾತ್ಕಾಲಿಕ ನೌಕರ! ವಿದ್ಯುತ್ ಕಡಿತವಾದರೆ ಕೆಲಸ ನಿಂತುಹೋಗುತ್ತದೆ, ಇಂಟರ್ನೆಟ್ ಸಿಗದ ದಿನಗಳಲ್ಲಿ ಜನರು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ವಾಪಸ್ ತೆರಳುತ್ತಾರೆ.
ನರೇಗಲ್ಲದ ಜನರ ಸಹನೆ ಈಗ ಮಿತಿ ಮೀರುತ್ತಿದೆ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ನಾಡ ಕಚೇರಿಗೆ ಸ್ವಂತ ಕಟ್ಟಡ, ಶುದ್ಧ ನೀರಿನ ವ್ಯವಸ್ಥೆ, ಶೌಚಾಲಯ ಮತ್ತು ಸಿಬ್ಬಂದಿ ನೇಮಕಾತಿ ಮಾಡಬೇಕು. ಇಲ್ಲದಿದ್ದರೆ ನರೇಗಲ್ಲದ ಜನರು ತಮ್ಮ ಹಕ್ಕಿಗಾಗಿ ಬೃಹತ್ ಹೋರಾಟಕ್ಕೆ ಮುಂದಾದರೂ ಅಚ್ಚರಿಯಿಲ್ಲ.
“ನರೇಗಲ್ಲ ನಾಡ ಕಛೇರಿ ವ್ಯವಸ್ಥೆಯ ಬಗ್ಗೆ ಗಜೇಂದ್ರಗಡ ತಹಸೀಲ್ದಾರರಿಗೆ ಹಲವಾರು ಬಾರಿ ಫೋನ್ ಮೂಲಕ ಸಮಸ್ಯೆಗಳನ್ನು ತಿಳಿಸಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಆಧಾರ್ ಕಾರ್ಡ್ ಕೇಂದ್ರ ಸ್ಥಗಿತವಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು”
ಮುತ್ತಪ್ಪ ನೂಲ್ಕಿ.
ಪ.ಪಂ ಸ್ಥಾಯಿ ಕಮಿಟಿ ಚೇರ್ಮನ್.
“ಆಧಾರ್ ಕಾರ್ಡ್ ಸೇವೆ ಸ್ಥಗಿತಗೊಂಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಶೀಘ್ರದಲ್ಲೇ ಚರ್ಚೆ ಮಾಡಿ ಪುನಃ ಕಾರ್ಯ ಪ್ರಾರಂಭಿಸಿ ಸಾರ್ವಜನಿಕರ ಅನುಕೂಲ ಕಲ್ಪಿಸಲಾಗುವುದು”
ಕಿರಣಕುಮಾರ ಕುಲಕರ್ಣಿ.
ಗಜೇಂದ್ರಗಡ ತಹಸೀಲ್ದಾರರು.



