ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ಜನತೆ ಬೆಚ್ಚಿ ಬೀಳುವಂತಾಗಿದ್ದು, ಮಕ್ಕಳನ್ನಷ್ಟೇ ಹೊರಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮುಂದೆ ಆಟ ಆಡುತ್ತಿರುವ ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಇದಕ್ಕೆ ನಿತ್ಯವೂ ಒಂದಿಲ್ಲೊಂದು ಕಡೆ ನಾಯಿ ಕಡಿತದಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಚಿಕಿತ್ಸೆಗೊಳಪಡುವ ಘಟನೆ ನಡೆಯುತ್ತಲೇ ಇದೆ.
ಪೇಪರ್-ಹಾಲು ಹಾಕುವವರಿಗೆ ತಪ್ಪದ ಗೋಳು
ಹಿಂಡು ನಾಯಿಗಳ ಬೀದಿ ಕಡಿದಾಟ, ಕೂಗಾಟ, ಓಟಾಟದ ಭಯದಿಂದ ಪಾಲಕರು ಮಕ್ಕಳನ್ನು ಶಾಲೆಗೆ, ಆಟಕ್ಕೆ, ಸೈಕಲ್ ಓಡಿಸಲು ಬಿಡಲು ಹೆದರುತ್ತಿದ್ದಾರೆ. ಅಲ್ಲದೇ ಹಾಲು, ಪೇಪರ್, ಹೂವು, ಹಣ್ಣು, ತರಕಾರಿ ಮಾರಾಟಗಾರರು ಬೆದರುವಂತಾಗಿದೆ. ರಾತ್ರಿ ಮತ್ತು ನಸುಕಿನ ಜಾವ ಸಂಚಾರದ ವೇಳೆ ಒಂದು ನಾಯಿ ಬೊಗಳಿದರೆ ಆ ಪ್ರದೇಶ ಎಲ್ಲ ನಾಯಿಗಳೂ ಬೊಗಳುತ್ತಾ ಸುತ್ತುವರಿಯುತ್ತವೆ. ಬೈಕ್ ಸವಾರರನ್ನು ಬೆನ್ನಟ್ಟುವ ನಾಯಿಗಳಿಂದ ಪಾರಾಗಲು ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.
ಮಕ್ಕಳು ಏನಾದರೂ ತಿಂಡಿ-ತಿನಿಸುಗಳನ್ನು ತರುತ್ತಿದ್ದರೆ ಅವರ ಮೇಲೆ ಎರಗುತ್ತವೆ. ವಾಯು ವಿಹಾರಿಗಳು, ಮಹಿಳೆಯರು, ಮಕ್ಕಳು, ವಯೋವೃದ್ಧರು ಎಲ್ಲರಲ್ಲೂ ನಾಯಿಗಳ ಭಯ ಕಾಡುತ್ತಿದೆ. ಬೀದಿ ನಾಯಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಕಾರಣ ಪಟ್ಟಣದ ಬಹುತೇಕ ರಸ್ತೆ ಬದಿಗಳ ಬದಿ, ಜನನಿಬಿಡ ಪ್ರದೇಶ, ಬಸ್-ಅಟೋ ನಿಲ್ದಾಣಗಳ ಪ್ರದೇಶಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಚಿಕನ್-ಎಗ್‌ರೈಸ್ ಸೆಂಟರ್, ಬೇಕರಿ, ಮಾಂಸ ಮಾರಾಟದ ಅಂಗಡಿಗಳು, ಗೂಡಂಗಡಿಗಳು, ಹೋಟೆಲ್-ದಾಬಾಗಳು ಅಷ್ಟೇ ಅಲ್ಲದೇ ಸಾರ್ವಜನಿಕರು ಅಲ್ಲಲ್ಲಿ ಚೆಲ್ಲುವ ಆಹಾರ ಪದಾರ್ಥ ಬೀದಿ ನಾಯಿಗಳಿಗೆ ಯಥೇಚ್ಚ ಆಹಾರ ನೀಡುವ ಮೂಲಗಳಾಗಿವೆ.
ಪ್ರಾಣಿಗಳ ಬೇಟೆಗೆ ನಾಯಿ ದಂಡು ಸನ್ನದ್ಧ!
ಇದೀಗ ಮಾಂಸದ ರುಚಿಗೆ ಬೆನ್ನತ್ತಿರುವ ಬೀದಿ ನಾಯಿಗಳು ಪಟ್ಟಣದಲ್ಲಿ ಸಣ್ಣ ಬೆಕ್ಕು, ಹಂದಿಮರಿ, ಕೋಳಿ ಮರಿಗಳನ್ನು ಹಿಡಿದು ತಿಂದು ಹಾಕುತ್ತಿವೆ. ಹೊರವಲಯದ ರೈತರ ಜಮೀನುಗಳಲ್ಲಿ ನಾಯಿಗಳ ಹಿಂಡು ಬೇಕಾಬಿಟ್ಟಿ ಓಡಾಡಿ ಬೆಳೆ ಹಾನಿ ಮಾಡುತ್ತಿವೆ. ಸಾಲದ್ದಕ್ಕೆ ಜಮೀನಿನಲ್ಲಿ ಬರುವ ಜಿಂಕೆ, ನರಿ, ಮೊಲಗಳಂತಹ ಸಣ್ಣ ಪ್ರಾಣಿಗಳನ್ನು ಬೇಟೆಯಾಡುವ ಬೀದಿ ನಾಯಿಗಳಿಂದ ಜನತೆಯ ನೆಮ್ಮದಿ ಹಾಳಾಗಿರುವುದಂತೂ ಸತ್ಯ. ನಾಯಿಗಳ ಹಾವಳಿಯಿಂದ ಹಂದಿಗಳ ಕಾಟ ಕಡಿಮೆಯಾಗಿದ್ದರೂ, ನಾಯಿ ಚೆಲ್ಲಾಟದಿಂದ ರೈತರಿಗೂ ಪ್ರಾಣ ಸಂಕಟವಾಗಿದೆ.
ನಿಯಂತ್ರಣಕ್ಕೆ ಬೇಕಿದೆ ಇಚ್ಛಾಶಕ್ತಿ
ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಯ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆಯೂ ಸೇರಿ, ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಸ್ಥಳೀಯ ಪುರಸಭೆ, ಗ್ರಾ.ಪಂನವರು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಅವುಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಈಗ ಇಡೀ ವಾತಾವರಣವನ್ನೆ ಹದಗೆಡಿಸಿದೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಪುರಸಭೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣದ ಜನರ, ಮಕ್ಕಳ ಜೀವದ ದೃಷ್ಟಿಯಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಮಾಡಬೇಕಿದೆ ಎನ್ನುತ್ತಾರೆ ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಶು ಸಂಗೋಪನಾ ಇಲಾಖೆಯೊಂದಿಗೆ ಚರ್ಚಿಸಿ ಸಂತಾನ ಹರಣ ಶಸ್ತ್ರಚಿಕಿತ್ಸೆ, ಸ್ಥಳಾಂತರ ಸೇರಿ ಇತರೇ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಸಾರ್ವಜನಿಕರು ಸಾಕು ನಾಯಿಗಳ ಕೊರಳಿಗೆ ಬೆಲ್ಟ್ ಕಟ್ಟಿ ದಿನಪೂರ್ತಿ ಮನೆಯಿಂದ ಹೊರಬಿಡದಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು, ಹೋಟೆಲ್-ದಾಬಾ, ಬೀದಿಬದಿ ವ್ಯಾಪಾರಸ್ಥರು ಆಹಾರ-ಪದಾರ್ಥಗಳನ್ನು ರಸ್ತೆ ಬದಿ ಚೆಲ್ಲದಂತೆ ಸೂಚಿಸಲಾಗುವುದು.
– ಮಂಜುನಾಥ್ ಮುದಗಲ್.
ಆರೋಗ್ಯ ನಿರೀಕ್ಷಕರು, ಪುರಸಭೆಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ತಿಂಗಳೊಂದಕ್ಕೆ 70ಕ್ಕೂ ಹೆಚ್ಚು ಬೀದಿನಾಯಿ ಕಡಿತದ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಬಹುತೇಕ ಚಿಕ್ಕ ಮಕ್ಕಳೇ ಇರುತ್ತಾರೆ. ನಾಯಿಕಡಿತಕ್ಕೆ ಅವಶ್ಯಕ ಔಷಧಿ ಲಭ್ಯವಿದೆ.
– ಡಾ.ಶ್ರೀಕಾಂತ ಕಾಟೇವಾಲೆ.
ಲಕ್ಷ್ಮೇಶ್ವರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ.