ಬೆಳಗಾವಿ:- ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದಕ್ಕೆ ಖಾನಾಪುರ ಸಿಪಿಐ ಅಮಾನತು ಮಾಡಲಾಗಿದೆ. ಹೀಗಾಗಿ ಅಮಾನತು ಖಂಡಿಸಿ ಬಂದ್ಗೆ ಕರೆ ಕೊಡಲಾಗಿದೆ. ಖಾನಾಪುರ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಿ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 19ರಂದು ಸಿ.ಟಿ.ರವಿಯವರನ್ನು ಹಿರೇಬಾಗೇವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಠಾಣೆಯ ಸಿಬ್ಬಂದಿಯನ್ನಿಟ್ಟುಕೊಂಡು ಸೂಕ್ತ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು. ಆಪಾದಿತರನ್ನು ಹೊರತುಪಡಿಸಿ ಯಾರನ್ನೂ ಒಳಬೀಡದಂತೆ ಆದೇಶಿಸಲಾಗಿತ್ತು.
ಆದರೆ, ಸಿಪಿಐ ಮಂಜುನಾಥ್ ನಾಯಕ್ ಸೂಕ್ತ ಬಂದೋಬಸ್ತ್ ಮಾಡಿರಲ್ಲ. ರಾಜಕೀಯ ಮುಖಂಡರು ಖಾನಾಪುರ ಠಾಣೆ ಒಳಗೆ ನುಗ್ಗಿ ಬಂದಿದ್ದರು. ಇದರಿಂದ ಠಾಣೆಯೊಳಗೆ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ರಾಜಕೀಯ ಮುಖಂಡರನ್ನು ತಡೆಯುವಲ್ಲಿ ವಿಫಲರಾಗಿದ್ದರು. ಮೇಲಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ,
ಕರ್ತವ್ಯ ಲೋಪ, ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಿಪಿಐ ಮಂಜುನಾಥ್ ನಾಯಕ್ ಅಮಾನತು ಖಂಡಿಸಿ ಬಿಜೆಪಿ, ಜೆಡಿಎಸ್, ದಲಿತ ಪರ, ಕನ್ನಡ ಪರ ಸಂಘಟನೆಗಳು ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಖಾನಾಪುರ ಪಟ್ಟಣ ಬಂದ್ಗೆ ಕರೆ ನೀಡಿವೆ.