ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಜಾತ್ರೆಯೊಂದರಲ್ಲಿ ಗನ್ ಹಿಡಿದು ಗುರಿ ಇಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಜಿಲ್ಲೆಯ ಚಿಕ್ಕಮಾಗರವಳ್ಳಿಯಲ್ಲಿ ನಡೆಯುವ ಸುಗ್ಗಿ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ಸಿಟಿ ರವಿ ಭಾಗಿಯಾಗಿದ್ದರು. ಕಳೆದ 15 ದಿನಗಳಿಂದ ಚಿಕ್ಕಮಾಗರವಳ್ಳಿಯಲ್ಲಿ ಸುಪ್ರಸಿದ್ಧ ಸುಗ್ಗಿ ಹಬ್ಬದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಕಳೆದೊಂದು ವಾರದಿಂದಲೂ ಸಿ.ಟಿ.ರವಿ ಅವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಇಂದು ಜಾತ್ರೆಯ ಕೊನೆಯ ದಿನವಾಗಿರುವುದರಿಂದ ಗನ್ ಹಿಡಿದು ತೆಂಗಿನಕಾಯಿಗೆ ಗುರಿ ಇಟ್ಟು ಅಂಬು ಹೊಡೆದು, ಗ್ರಾಮಸ್ಥರ ಜೊತೆ ಕೋಲಾಟಕ್ಕೆ ಹೆಜ್ಜೆ ಹಾಕಿದರು. ಸಿ.ಟಿ ರವಿ ಜೊತೆ ಗ್ರಾಮದ ಯುವಕರು, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಸಾಮಾನ್ಯವಾಗಿ 15 ದಿನಗಳ ಕಾಲ ನಡೆಯುವ ಸುಗ್ಗಿ ಹಬ್ಬವನ್ನು ಮಲೆನಾಡಿಗರು ಅತ್ಯಂತ ಭಯ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಹತ್ತಾರು ಹಳ್ಳಿಯ ಜನರು ಮಾಂಸ-ಮದ್ಯ ಸೇವಿಸದೆ, ಕಾಲಿಗೆ ಚಪ್ಪಲಿ ಹಾಕದೆಯೂ ಸುಗ್ಗಿ ಹಬ್ಬ ಆಚರಿಸುತ್ತಾರೆ. ಹಿಂದಿನ ಕಾಲದಲ್ಲಿ ಸುಗ್ಗಿ ಹಬ್ಬದ ವೇಳೆ ಬೇರೆ ಊರಿನವರು ಈ ಊರಿನ ಒಳಗೂ ಹೋಗುತ್ತಿರಲಿಲ್ಲ ಎನ್ನಲಾಗಿದೆ.