ವಿಜಯಸಾಕ್ಷಿ ಸುದ್ದಿ, ಗದಗ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಳೆದ 121 ವರ್ಷಗಳಿಂದ 849 ಶಾಖೆಗಳೊಂದಿಗೆ ಗ್ರಾಹಕರ ಸೇವೆಯಲ್ಲಿ ತನ್ನನ್ನು ಸಮರ್ಪಿಸಿಕೊಂಡಿರುವ ಸಿಟಿ ಯುನಿಯನ್ ಬ್ಯಾಂಕ್ (ಕಬ್) ಇದೀಗ ಗದಗ ಜಿಲ್ಲೆಯನ್ನು ಪ್ರವೇಶಿಸಿದ್ದು, ಗದಗ ನಗರದ ನಾಮಜೋಷಿ ರೋಡ್‌ನಲ್ಲಿ ತನ್ನ ಪ್ರಥಮ ಶಾಖೆಯನ್ನು ಶುಕ್ರವಾರ ಶುಭಾರಂಭಗೊಳಿಸಿತು.
ಗಣ್ಯ ಉದ್ಯಮಿ, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷ ಎಸ್.ಪಿ. ಸಂಶಿಮಠ ಜ್ಯೋತಿ ಬೆಳಗಿಸುವ ಮೂಲಕ ಗದಗ ಶಾಖೆಯನ್ನು ಉದ್ಘಾಟಿಸಿ, ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಈ ಬ್ಯಾಂಕ್ ಮುಂದಾಗಲಿ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ಯಾಂಕ್ ಸ್ಥಾಪನೆಗೊಂಡಿರುವದು ಹೆಮ್ಮೆಯ ಸಂಗತಿ ಎಂದರು.
ಎಟಿಎಂ ಮಷಿನ್ ಉದ್ಘಾಟಿಸಿ ಮಾತನಾಡಿದ ಗದುಗಿನ ಆಝಾದ್ ಕೋ-ಆಪ್ ಬ್ಯಾಂಕ್‌ನ ಚೇರಮನ್ ಸರ್ಫರಾಜಅಹ್ಮದ್ ಉಮಚಗಿ ನಗರ ಮತ್ತು ನಾಗರೀಕತೆ ಹೆಚ್ಚಿದಂತೆ ಗ್ರಾಹಕರ ಬೇಕು-ಬೇಡಿಕೆಗಳನ್ನು ಈಡೇರಿಸುವಲ್ಲಿ ಬ್ಯಾಂಕುಗಳು ಮುಂದಾಗಿವೆ. ಬ್ಯಾಂಕುಗಳು ಗ್ರಾಹಕರ ವಿಶ್ವಾಸವನ್ನು ಪಡೆದುಕೊಂಡಲ್ಲಿ ಪ್ರಗತಿ ಸಾಧ್ಯ ಎಂದರು.
ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಕೆ.ಗಣೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ವರನ್ನು ಸ್ವಾಗತಿಸಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಆರ್. ಭರತ್‌ರಾಮ್, ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಡಾ.ಎನ್. ಕಾಮಕೋಡಿ ಅವರ ಮಾರ್ಗದರ್ಶನದಲ್ಲಿ ಗದುಗಿನಲ್ಲಿ ಈ ಶಾಖೆಯನ್ನು ತೆರೆಯಲಾಗಿದೆ ಎಂದರು.
ಸಮಾರಂಭದಲ್ಲಿ ಗಣ್ಯ ವ್ಯಾಪಾರಸ್ಥರು, ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿಯವರಿದ್ದರು.