ಪೌರಕಾರ್ಮಿಕರಿಗೆ ವಿನಾಕಾರಣ ಅವಮಾನವಾಗಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಮುಂದೆ ತನ್ನ ಮಗನನ್ನು ಹೊರಗುತ್ತಿಗೆ ಪೌರಕಾರ್ಮಿಕನನ್ನಾಗಿ ಸೇರಿಸಿಕೊಳ್ಳಬೇಕೆಂದು ಸುರೇಶ ಬಸವನಾಯ್ಕರ ಎಂಬಾತ ತನ್ನ ಮೈಗೆ ಸಗಣಿ ಬಳಿದುಕೊಂಡು ಬುಧವಾರ ಪ್ರತಿಭಟನೆ ನಡೆಸಿರುವ ಕ್ರಮ ವಿರೋಧಿಸಿ, ಈತನ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗುರುವಾರ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಅವರ ನೇತೃತ್ವದಲ್ಲಿ ಪೌರ ಕಾರ್ಮಿಕರು ಮುಖ್ಯಾಧಿಕಾರಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಬಸವಣ್ಣೆಪ್ಪ ನಂದೆಣ್ಣವರ, ಸುರೇಶ ಬಸವನಾಯ್ಕರ ಎನ್ನುವ ವ್ಯಕ್ತಿ ಪುರಸಭೆಯಲ್ಲಿ ಪೌರಕಾರ್ಮಿಕ, ಸಪಾಯಿ ಕರ್ಮಚಾರಿಯಾಗಿ ಅಥವಾ ಕೆಲಸ ನಿರ್ವಹಿಸಿಯೇ ಇಲ್ಲ. ಆದರೂ ದುರುದ್ದೇಶದಿಂದ, ಕುಡಿದ ಮತ್ತಿನಲ್ಲಿ ಅಸಾಂವಿಧಾನಿಕ, ಅಸಂಬದ್ಧ ರೀತಿಯಲ್ಲಿ ವರ್ತಿಸಿದ್ದಾನೆ. ಈ ವಿಷಯ ಪುರಸಭೆಗೆ ಮತ್ತು ಪೌರಕಾರ್ಮಿಕರಿಗೆ ವಿನಾಕಾರಣ ಅವಮಾನವಾಗುವಂತೆ ಮಾಡಿದೆ.

ಆತನು ತನ್ನ ಮಗನಿಗೆ ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಪುರಸಭೆ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳಿಗಾಗಲಿ ಮನವಿಯನ್ನೂ ಮಾಡದೇ ಸುಳ್ಳು ಆರೋಪ ಮಾಡಿದ್ದಾನೆ. ಹೋರಾಟದ ಹಕ್ಕನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೇ ವೃಥಾ ಆರೋಪ ಮಾಡಿರುವ ಈತನ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ವಿನಂತಿಸಿದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಈ ವ್ಯಕ್ತಿ ತನ್ನ ಬೇಡಿಕೆ, ಪ್ರತಿಭಟನೆಯ ಬಗ್ಗೆ ಕಿಂಚಿತ್ ಮಾಹಿತಿಯನ್ನೂ ನೀಡದೇ ಏಕಾಏಕಿ ವರ್ತಿಸಿದ್ದಾನೆ. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು.

ಪುರಸಭೆ ಉಪಾಧ್ಯಕ್ಷ ಪೀರದೋಷ ಆಡೂರ, ಸದಸ್ಯರಾದ ರಾಮಪ್ಪ ಗಡದವರ, ಪ್ರಕಾಶ ಕೊಂಚಿಗೇರಿಮಠ, ಫಕ್ಕೀರೇಶ ನಂದೆಣ್ಣವರ,ದೇವೇಂದ್ರಪ್ಪ ನಂದೆಣ್ಣವರ, ರಾಜು ನಂದೆಣ್ಣವರ, ಅನಿಲ ನಂದೆಣ್ಣವರ, ಮಂಜುನಾಥ ಬಸವನಾಯ್ಕರ್, ಮಂಜುನಾಥ ಹಾದಿಮನಿ, ರಮೇಶ ಕೊಣ್ಣೂರ, ಚನ್ನಪ್ಪ ಶಿರಹಟ್ಟಿ, ವಿಶ್ವನಾಥ ಹಾದಿಮನಿ, ಮಂಜುನಾಥ ಅಯ್ಯನವರ, ಅಶೋಕ ನಡುಗೇರಿ, ಪ್ರಕಾಶ ಹಿತ್ತಲಮನಿ ಸೇರಿದಂತೆ ಅನೇಕ ಪೌರಕಾರ್ಮಿಕರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here