ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಜನರ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವ ಕಾರ್ಯವನ್ನು ಪೌರಕಾರ್ಮಿಕರು ಮಾಡುತ್ತಿದ್ದು, ಪೌರಕಾರ್ಮಿಕರು ಸಹ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸದ ವೇಳೆಯಲ್ಲಿ ಸುರಕ್ಷಾ ಪರಿಕರಗಳನ್ನು ಧರಿಸಿ ಕೆಲಸ ನಿರ್ವಹಿಸುವದು ಅವಶ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.
ಅವರು ಬುಧವಾರ ಪಟ್ಟಣದ ಪುರಸಭೆಯಲ್ಲಿ ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಪೌರಕಾರ್ಮಿಕರು ಸುರಕ್ಷಾ ಪರಿಕರಗಳನ್ನು ಧರಿಸಿ ಪ್ರತಿನಿತ್ಯ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿದ್ದು, ನೀವು ಆರೋಗ್ಯವಾಗಿದ್ದರೆ ಮಾತ್ರ ಪಟ್ಟಣದ ಜನರು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಪೌರಕಾರ್ಮಿಕರು ತಮ್ಮ ಅರೋಗ್ಯವನ್ನು ಲೆಕ್ಕಿಸದೆ ನಿರಂತರ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಸೇವಾ ಭಾವದಿಂದ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಜನರು ಸಹಕಾರ ನೀಡುವದು ಅಗತ್ಯವಾಗಿದೆ. ಪರಿಕರಗಳನ್ನು ಉಪಯೋಗಿಸದೆ ಇದ್ದವರನ್ನು ಗೈರು ಹಾಜರಿ ಎಂದು ಪರಿಗಣಿಸಲಾಗುತ್ತದೆ ಎಂದು ಪೌರಕಾರ್ಮಿಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸವರಾಜ ಓದುನವರ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಅರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಶಿವಣ್ಣ ಮ್ಯಾಗೇರಿ, ಬಸವಣೆಪ್ಪ ನಂದೆಣ್ಣನವರ, ಹನುಮಂತಪ್ಪ ನಂದೆಣ್ಣನವರ, ನಿಂಬಯ್ಯನಮಠ, ನೇತ್ರಾ ಹೊಸಮನಿ, ಉಮಾ ಬೆಳವಿಗಿ, ಪುರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು ಇದ್ದರು.