ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಎಸ್ಟಿಪಿಎಂಬಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಣ್ಣಿನಿಂದ ತಯಾರಿಸಿದ ವಸ್ತುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಪ್ರಾಯೋಗಿಕವಾಗಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಜೋಳದ ಪೇಟೆಯ ಹತ್ತಿರವಿರುವ ಮಣ್ಣಿನ ಮಡಿಕೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಸಿದ್ಧಪಡಿಸುವ ಕುಂಬಾರ ಕುಟುಂಬದವರ ಮನೆಗಳಿಗೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ತೆರಳಿ ಮಕ್ಕಳಿಗೆ ಮಣ್ಣಿನಿಂದ ಮಾಡಿದ ವಸ್ತುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು. ಮಡಿಕೆಗಳನ್ನು ಸಿದ್ಧಪಡಿಸುವ ವಿರುಪಾಕ್ಷಪ್ಪ ಕುಂಬಾರ ಮಕ್ಕಳಿಗೆ ಮಾಹಿತಿ ನೀಡಿ ಮಾತನಾಡಿ, ಇಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಗಳ ಮಹತ್ವ ಕಡಿಮೆಯಾಗುತ್ತಿದೆ. ಮಣ್ಣಿನಲ್ಲಿರುವ ಶಕ್ತಿಯ ಬಗ್ಗೆ ಜನರಲ್ಲಿ ಮೊದಲಿನಂತೆ ತಿಳುವಳಿಕೆ ಇಲ್ಲದಂತಾಗಿದೆ. ಹಿಂದಿನ ಹಿರಿಯರು ಮಣ್ಣಿನ ಮಡಿಕೆಗಳಲ್ಲಿ ಅಡುಗೆಯನ್ನು ಮಾಡಿ ತಿನ್ನುತ್ತಿದ್ದರು. ಇದು ಆರೋಗ್ಯಕ್ಕೂ ಸಹ ಉತ್ತಮವಾಗಿರುತ್ತದೆ. ಇವುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಕಾರ್ಯ ಮಾಡತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಕ ಎಚ್.ಎಮ್. ಕೊಂಡಾಬಂಗಿ ಮಾತನಾಡಿ, ಮಕ್ಕಳಿಗೆ ೩ನೇ ತರಗತಿಯ ಪರಿಸರ ಅಧ್ಯಯನ ಪುಸ್ತಕದಲ್ಲಿ ಮಡಿಕೆ ಮಹತ್ವ ಎಂಬ ಪಾಠ ಇದ್ದು, ಮಣ್ಣಿನ ವಸ್ತುಗಳ ಬಗ್ಗೆ ಪ್ರಾಯೋಗಿಕವಾಗಿ ತೋರಿಸಲು ಇಂತಹ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದೇವೆ. ಫ್ರಿಡ್ಜ್ನಲ್ಲಿಟ್ಟಿರುವ ನೀರು ಕುಡಿಯುವದರಿಂದ ಆರೋಗ್ಯದ ಮೇಲೆ ಅಪಾಯ ಉಂಟಾಗುತ್ತದೆ. ಆದರೆ ಅದೇ ನೀರನ್ನು ಮಣ್ಣಿನ ಮಡಿಕೆಯಲ್ಲಿಟ್ಟು ಕುಡಿದಾಗ ಅದು ತಂಪಾಗಿ ಇರುವದರ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ ಎಂದು ಮಾಹಿತಿ ನೀಡಿದರು.