ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೀಪಾವಳಿ ಹಬ್ಬ ಮುಗಿದ ನಂತರ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ತುಂಬಿದ್ದು, ವಿಶೇಷವಾಗಿ ಪಾರ್ವತಿ ಮಕ್ಕಳ ಬಳಗದ ಪ್ರಾಥಮಿಕ ಶಾಲೆ, ತೋಂಟದ್ದೇವರಮಠದ ಹತ್ತಿರ, ಖರಾಟೆ ಅವರ ಓಣಿ, ಹಳೇ ಪೊಲೀಸ್ ಠಾಣೆ, ಬಜಾರ ಸೇರಿದಂತೆ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿಯೇ ತುಂಬಿ ಕೊಂಡಿತ್ತು. ಇದನ್ನು ಮನಗಂಡ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ಹಾಗೂ ಸಿಬ್ಬಂದಿ ಬುಧವಾರ ಪೌರ ಕಾರ್ಮಿಕರೊಂದಿಗೆ ಸ್ವಚ್ಛಗೊಳಿಸಿದರು.
ಕಸ ಸಾಗಿಸಲು ಪುರಸಭೆ ವಾಹನಗಳನ್ನು ಹೊರತುಪಡಿಸಿ ಎರಡು ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಊರನ್ನು ಸ್ವಚ್ಛ ಹಾಗೂ ಸುಂದರವಾಗಿ ಇಡುವಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಕದೆ ಕಸ ಸಂಗ್ರಹಿಸಲು ಬರುವ ಪುರಸಭೆ ವಾಹನಗಳಲ್ಲೇ ಹಾಕಬೇಕು. ವಿಶೇಷವಾಗಿ ಹೂ, ಹಣ್ಣು, ಹೋಟೆಲ್ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಕಸ ಚೆಲ್ಲಬಾರದು ಎಂದು ತಿಳಿಸಿದರು.


