ಕಡ್ಡಾಯ ಶೌಚಾಲಯ ಬಳಕೆಗೆ ಪಣತೊಡಿ : ಎಸ್.ಕೆ. ಇನಾಮದಾರ

0
Cleanliness He Seva Programme
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ : ಗ್ರಾಮೀಣ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡಬೇಕಾದರೆ ಪ್ರತಿಯೊಂದು ಮನೆಯೂ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಸ್ವಚ್ಛ ಭಾರತ್ ಯೋಜನೆ ಹಾಗೂ ನರೇಗಾ ಯೋಜನೆಯಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣಕ್ಕೆ ಗ್ರಾ.ಪಂ ಕ್ರಮ ಕೈಗೊಳ್ಳುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ ಕನಸು ಈಡೇರುತ್ತದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.

Advertisement

ಜಿಲ್ಲಾ ಪಂಚಾಯಿತಿ, ನರಗುಂದ ತಾಲೂಕು ಪಂಚಾಯಿತಿ ಹಾಗೂ ಕನಕೀಕೊಪ್ಪ ಗ್ರಾ.ಪಂ ಸಂಯುಕ್ತಾಶ್ರಯದಲ್ಲಿ ಗ್ರಾಮದ ಎನ್.ಸಿ.ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಡಿದರು.

ಗ್ರಾಮೀಣ ಪ್ರದೇಶದಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರನ್ನು ಬಳಕೆ ಮಾಡಬೇಕು. ನೀರನ್ನು ಪೋಲು ಮಾಡಿ ಹರಿಬಿಡುವುದರಿಂದ ಗ್ರಾಮದ ವಾತಾವರಣ ಮಲಿನತೆಗೆ ಕಾರಣವಾಗುತ್ತದೆ. ಇದರಿಂದ ಗ್ರಾಮದಲ್ಲಿ ಕೀಟಾಣುಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ನೀರನ್ನು ಮಿತವಾಗಿ ಬಳಸಿ, ಮಲ ವಿಸರ್ಜನೆಗೆ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳಿ ಎಂದರು.

ಅಂಗನವಾಡಿ ಕಾರ್ಯಕರ್ತೆ ಶಾರದಾ ಹಳೇಮನಿ ಮತ್ತು ಸಮುದಾಯ ಆರೋಗ್ಯಾಧಿಕಾರಿ ರವಿ ವಾಲ್ಮೀಕಿ ಮಾತನಾಡಿ, ವೈಯಕ್ತಿಕ ಸ್ವಚ್ಛತೆ ಹಾಗೂ ಶುಚಿತ್ವದಿಂದ ಕೈ ತೊಳೆಯುವ ವಿಧಾನದ ಬಗ್ಗೆ ಶಾಲಾ ಮಕ್ಕಳಲ್ಲಿ ತಿಳುವಳಿಕೆ ಮೂಡಿಸಿದರು.

ಕಾರ್ಯಕ್ರಮ ಬಳಿಕ ಶಾಲಾ ಮಕ್ಕಳಿಗೆ ಮತ್ತು ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಶುಚಿತ್ವಕ್ಕಾಗಿ ಪ್ರತಿಜ್ಞಾವಿಧಿಯನ್ನು ತಾ.ಪಂ ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ ಬೋಧಿಸಿದರು.

ಗ್ರಾ.ಪಂ ಉಪಾಧ್ಯಕ್ಷರಾದ ಎಸ್.ಎ.ಬಡಿಗೇರ, ಸದಸ್ಯರಾದ ಎಮ್.ಎಸ್.ದೊಡಮನಿ, ಕನಕರೆಡ್ಡಿ ಗಿರಡ್ಡಿ, ವೆಂಕಮ್ಮ ಮಾದರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಮೇಶಗೌಡ ರಾಯನಗೌಡರ, ಮುಖ್ಯೋಪಾಧ್ಯಾಯರಾದ ಎಸ್.ಪಿ. ಹಿರೇಮನಿ, ಗ್ರಾ.ಪಂ ಸಿಬ್ಬಂದಿ ವರ್ಗ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಭಾಗವಹಿಸಿದ್ದರು.

ತಾ.ಪಂ ಸಹಾಯಕ ನಿರ್ದೇಶಕರಾದ ಕೃಣ್ಣಮ್ಮ ಹಾದಿಮನಿ ಮಾತನಾಡಿ, ಸ್ವಚ್ಚತಾ ಹಿ ಸೇವಾ ಆಂದೋಲನವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಣೆ ಮಾಡುತ್ತಿದ್ದು, ನಿರಂತರವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15 ದಿನಗಳ ಕಾಲ ಸ್ವಚ್ಛತಾ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳಲ್ಲೂ ಶುಚಿತ್ವದ ಜಾಗೃತಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here