ಬೀದರ್: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವಾಗಲೇ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಬೀದರ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, “ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ. ಅವರಾಗಿಯೇ ಅಧಿಕಾರ ಬಿಟ್ಟರೆ ಮಾತ್ರ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಯುಗಾದಿವರೆಗೂ ಯಾವುದೇ ಬದಲಾವಣೆ ನಡೆಯದು” ಎಂದು ನೇರವಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಹಾಲುಮತ ಸಮಾಜದ ಹಿನ್ನೆಲೆ ಕುರಿತು ಮಾತನಾಡಿದ ಶ್ರೀಗಳು, “ಹಾಲುಮತ ಸಮಾಜದವರಿಗೆ ಅಧಿಕಾರ ಸಿಕ್ಕರೆ ಅದನ್ನು ಬಿಡಿಸಿಕೊಳ್ಳುವುದು ಸುಲಭವಲ್ಲ. ಹಕ್ಕ-ಬುಕ್ಕ, ಛತ್ರಪತಿ ಶಿವಾಜಿ, ಅಹಲ್ಯಾಬಾಯಿ ಹೋಳ್ಕರ್ ಇದೇ ಸಮಾಜದವರು. ಸಿದ್ದರಾಮಯ್ಯ ಈ ಸಮಾಜದ ಮೊದಲ ಸಿಎಂ. ಅವರನ್ನು ಕೆಳಗಿಳಿಸುವುದು ಸುಲಭವಲ್ಲ” ಎಂದು ವಿಶ್ಲೇಷಣೆ ನೀಡಿದರು.
ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಅವರು, “ಅವರು ನಮಗೆ ಆತ್ಮೀಯರು. ಆದರೆ ಈಗಲೇ ಅವರ ಸಿಎಂ ಪಟ್ಟದ ಬಗ್ಗೆ ಮಾತನಾಡುವ ಸಮಯ ಬಂದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಇನ್ನು ರಾಜಕೀಯದ ಹೊರತಾಗಿ ದೇಶದ ಭವಿಷ್ಯ ಕುರಿತು ಆತಂಕಕಾರಿ ಮುನ್ಸೂಚನೆ ನೀಡಿದ ಶ್ರೀಗಳು,
“ದೇಶಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಅಪಾಯ ಕಾದಿದೆ. ಜನಸಾಮಾನ್ಯರಿಗೆ ಸಾವು-ನೋವು ಸಂಭವಿಸುವ ಸೂಚನೆಗಳಿವೆ. ಜೊತೆಗೆ ದೇಶದ ಇಬ್ಬರು ಮಹಾನ್ ವ್ಯಕ್ತಿಗಳು ಮರಣ ಹೊಂದುವ ಸಾಧ್ಯತೆ ಇದೆ” ಎಂದು ಹೇಳಿ ಜನರಲ್ಲಿ ಆತಂಕ ಹಾಗೂ ಕುತೂಹಲ ಮೂಡಿಸಿದ್ದಾರೆ.



