ಬೆಂಗಳೂರು: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ವಿಚಾರಗಳನ್ನು ಚರ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರನ್ನೂ ದೆಹಲಿಗೆ ಆಹ್ವಾನಿಸಿದ್ದಾರೆ ಎಂದು ವಿಧಾನಸಭಾ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆಯುವ ಮಾತುಕತೆಯಲ್ಲಿ ಎಲ್ಲಾ ಗೊಂದಲಗಳಿಗೆ ಅಂತ್ಯ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್ ಪಟ್ಟಣ್, ನಿನ್ನೆ ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಯಾವುದೇ ಅಧಿಕೃತ ಚರ್ಚೆ ನಡೆಸಿಲ್ಲ. ಆದರೆ ಇಬ್ಬರನ್ನೂ ದೆಹಲಿಗೆ ಬರಲು ಸೂಚಿಸಿದ್ದಾರೆ. ದೆಹಲಿಗೆ ಹೋದ ನಂತರ ಎಲ್ಲ ವಿಚಾರಗಳನ್ನು ಸರಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ವಿವರಿಸಿದರು.
ಡಿಕೆ ಶಿವಕುಮಾರ್ ಮಾತನಾಡಬೇಕು ಎಂದು ಕೇಳಿಕೊಂಡ ಸಂದರ್ಭದಲ್ಲಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ಬರಬೇಕು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಸಂಕ್ರಾಂತಿ ಬಳಿಕ ಇಬ್ಬರೂ ದೆಹಲಿಗೆ ತೆರಳಿ ಮಾತುಕತೆ ನಡೆಸಲಿದ್ದು, ಶೇ.100ರಷ್ಟು ಗೊಂದಲಗಳು ಪರಿಹಾರವಾಗಲಿವೆ ಎಂದು ಅಶೋಕ್ ಪಟ್ಟಣ್ ವಿಶ್ವಾಸ ವ್ಯಕ್ತಪಡಿಸಿದರು.
ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದು, ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ರನ್ವೇಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ರಾಹುಲ್ ಗಾಂಧಿ ಬಂದ ಸಂದರ್ಭದಲ್ಲಿ ಸಾಮಾನ್ಯ ಮಾತುಕತೆ ಮಾತ್ರ ನಡೆದಿದೆ ಎಂದು ಸ್ಪಷ್ಟಪಡಿಸಿದರು.



