ಚಿಕ್ಕೋಡಿ:- ಲಿಂಗಾಯತ ಸಮಾಜವನ್ನು ಒಡೆಯುವ ಉದ್ದೇಶ ಸಿಎಂ ಸಿದ್ದರಾಮಯ್ಯಗೆ ಇದೆ ಎಂದು ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಸಮಾಜ ಒಡೆಯಬೇಕಿದೆ ಹಾಗೂ ಸಂಘಟಿತರಾಗಿರಬಾರದು ಎಂಬ ಉದ್ದೇಶವಿದೆ. ಲಿಂಗಾಯತ ಸಮಾಜದಲ್ಲಿ ಬೇಧ ಮಾಡಿ, ಸಮಾಜ ಒಡೆಯಬೇಕಿದೆ. ಲಿಂಗಾಯತ ಸಮಾಜ ಸಂಘಟಿತವಾಗಿರಬಾರದು ಎನ್ನುವ ಉದ್ದೇಶ ಸಿಎಂ ಅವರಿಗಿದೆ. ದೊಡ್ಡದಾದ ಲಿಂಗಾಯತ ಸಮಾಜವನ್ನ ಒಡೆದು ಐದನೇ ಸ್ಥಾನಕ್ಕೆ ತರಬೇಕು. ಸರ್ಕಾರದ ಸೌಲಭ್ಯಗಳು ಈ ಸಮಾಜಕ್ಕೆ ಸಿಗದಂತೆ ಮಾಡುತ್ತಿದ್ದಾರೆ ಎಂದಿದ್ದಾರೆ.
ವೈಯಕ್ತಿಕವಾಗಿ ಕೆಲವೊಂದು ರಾಜಕೀಯ ಶಕ್ತಿಗಳು ನನ್ನನ್ನ ಟಾರ್ಗೆಟ್ ಮಾಡುತ್ತಿವೆ. ರೌಡಿ ಶೀಟರ್‌ಗಳ ರೀತಿ ನನ್ನನ್ನು ಬ್ಯಾನ ಮಾಡಲಾಗುತ್ತಿದೆ. ಚೀಪ್ ಸೆಕ್ರೆಟರಿಗಳಿಂದ ನನ್ನನ್ನು ಬ್ಯಾನ್ ಮಾಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ ಪಾಟೀಲ್ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ. ಬಸವ ತತ್ವ ಹಿಂದೂತ್ವವನ್ನ ಬಿಟ್ಟಿಲ್ಲ. ನಾಲ್ಕು ವಚನ ತೆಗೆದುಕೊಂಡು ಲಿಂಗಾಯತರನ್ನ ಹಿಂದೂ ಧರ್ಮದಿಂದ ಬೇರ್ಪಡಿಸುವ ಹುನ್ನಾರ ತಾಲಿಬಾನಿಗಳು ನಡೆಸಿದ್ದಾರೆ. ಹಿಂದೂ ಧರ್ಮವನ್ನ ಸಣ್ಣ ಸಣ್ಣ ತುಣಕು ಮಾಡುತ್ತಾ ಹೋದರೇ ಈ ದೇಶದಲ್ಲೇ ಹಿಂದೂಗಳೇ ಅಲ್ಪಸಂಖ್ಯಾತರಾಗಬೇಕಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.



