ಬೆಂಗಳೂರು: ಸಿಎಂ ಅವರು ಕಾರ್ಯಕ್ರಮ ಎರಡು ದಿನ ಮುಂದೂಡಿ ಅಂದ್ರೂ ಗಡ್ಕರಿಯವರು ಕೇಳಲಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸಿಗಂದೂರು ಸೇತುವೆ ಶಿಷ್ಟಾಚಾರ ಸಮರ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲಿಸಿಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಗಡ್ಕರಿ ಆಹ್ವಾನ ಕೊಟ್ಟಿಲ್ಲ, ಇದು ಸರಿಯಲ್ಲ. ಸಿಎಂ ಅವರು ಕಾರ್ಯಕ್ರಮ ಎರಡು ದಿನ ಮುಂದೂಡಿ ಅಂದ್ರೂ ಗಡ್ಕರಿಯವರು ಕೇಳಲಿಲ್ಲ ಎಂದರು.
ಇನ್ನೂ ಎರಡು ದಿನ ಕಾರ್ಯಕ್ರಮ ಮುಂದೂಡಿದ್ದಿದ್ರೆ ಏನು ತೊಂದರೆ ಆಗ್ತಿತ್ತೋ ನನಗೆ ಗೊತ್ತಿಲ್ಲ. ಗಡ್ಕರಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಅವರು ಒಳ್ಳೆಯ ಕೆಲಸಗಾರ. ಕ್ರಿಯಾಶೀಲ ಸಚಿವರು ಅನ್ನೋದನ್ನು ಕೇಳಿದ್ದೇವೆ. ಆದ್ರೆ ಯೋಜನೆಯೊಂದರ ಉದ್ಘಾಟನೆ ಒಂದೆರಡು ದಿನ ಮುಂದೂಡುವ ಬಗ್ಗೆ ಅರ್ಥ ಮಾಡಿಕೊಳ್ಳದಿದ್ರೆ ಏನು ಹೇಳೋಕ್ಕಾಗುತ್ತೆ?.
ಯಾವುದೇ ಯೋಜನೆ ಇದ್ರೂ ರಾಜ್ಯದಲ್ಲಿ ಕೇಂದ್ರ ಸರ್ಕಾರ ರಾಜ್ಯದ ವಿಶ್ವಾಸ ತಗೋಬೇಕು, ಇದೇ ಒಕ್ಕೂಟ ವ್ಯವಸ್ಥೆ. ಸೇತುವೆಗೆ ಹೆಸರಿಡೋದಾಗಲಿ, ಶಿಷ್ಟಾಚಾರ ಪಾಲನೆ ಆಗಲಿ ಗೊಂದಲ ಮಾಡಬಾರದು. ಕ್ರೆಡಿಟ್ ತಗೊಳ್ಳೋದು ಬೇರೆ ವಿಚಾರ. ಆದ್ರೆ ಶಿಷ್ಟಾಚಾರವನ್ನಾದ್ರೂ ಪಾಲಿಸಬೇಕಿತ್ತು ಅಲ್ವಾ? ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ..