ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಟ್ಟಣದ ಸ್ಕೂಲ್ ಚಂದನದಲ್ಲಿ ಶನಿವಾರ ನಡೆದ ವಿಜ್ಞಾನ ವಿಸ್ತೃತ, ಚಂದನ ಶ್ರೀ ಪ್ರಶಸ್ತಿ ಪ್ರದಾನ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರೈತರು, ಗುಡಿಸಲು ವಾಸಿಗಳು, ಕನ್ನಡಪರ, ರೈತಪರ ಸಂಘಟನೆಯವರು, ಸಾರ್ವಜನಿಕರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿಗಳು ಕಾರ್ಯಕ್ರಮ ಮುಗಿಸಿ 4 ಗಂಟೆಗೆ ಹೊರಡುವ ವೇಳೆ ಮನವಿ ಸಲ್ಲಿಕೆಗಾಗಿ ನಿಗದಿಪಡಿಸಿದ್ದ ಸ್ಥಳದಲ್ಲಿ ಕಾಯ್ದು ಕುಳಿತಿದ್ದ ಜನರಿದ್ದ ಸ್ಥಳಕ್ಕೆ ತಾವೇ ಬಂದು ಮನವಿ ಸ್ವೀಕರಿಸಿದರು.
ಕಾರ್ಯಕ್ರಮ ನಡೆದ ಸ್ಥಳಕ್ಕೆ ಹೊಂದಿಕೊಂಡು ಕಳೆದ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಗುಡಿಸಲುವಾಸಿ ಮಹಿಳೆಯರು ಆಶ್ರಯ ನಿವೇಶನಕ್ಕಾಗಿ ತಮಗೆ ತಿಳಿದಂತೆ ನಾಲ್ಕೈದು ಸಾಲುಗಳಲ್ಲಿ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ಲಕ್ಷ್ಮೇಶ್ವರ ಪಟ್ಟಣದಲ್ಲಿ 8 ವರ್ಷಗಳ ಹಿಂದೆ ಆಶ್ರಯ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ಕೊಟ್ಟಿದ್ದರೂ ನಿವೇಶನ ಕಲ್ಪಿಸಿಲ್ಲ ಎಂದು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಸಮ್ಮುಖದಲ್ಲಿ ಕರವೇ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಖುಲಾಸೆ ಮಾಡುವಂತೆ, ಪರವಾನಗಿ ಪಡೆದ ದಸ್ತು ಬರಹಗಾರರ ಒಕ್ಕೂಟದಿಂದ ಕಾವೇರಿ-2 ತಂತ್ರಾಂಶದಲ್ಲಿ ಪ್ರತ್ಯೇಕ ಡೀಡ್ ರೈಟರ್ ಲಾಗಿನ್ ವ್ಯವಸ್ಥೆ ಕಲ್ಪಿಸುವಂತೆ, ತಾಲೂಕಿನ ಶೆಟ್ಟಿಕೆರಿ ಗ್ರಾಮಸ್ಥರು ಶೆಟ್ಟಿಕೆರಿ-ಕುಂದ್ರಳ್ಳಿ ಗ್ರಾಮದ ಕೆರೆಗಳನ್ನು ಸೇರಿಸಬೇಕೆಂದು, ಹಸಿರುಸೇನೆ ರೈತ ಸಂಘದವರು, ಭೂ ಮಾಲೀಕತ್ವ ಅರ್ಜಿ ಮಂಜೂರು ಮಾಡುವುದು, ತಾಲೂಕಿನ ಹಿರೇಮಲ್ಲಾಪುರ ಗ್ರಾಮದಲ್ಲಿ ಪ್ರಾರಂಭಗೊಳ್ಳುತ್ತಿರುವ ಇಥೆನಾಲ್ ಫ್ಯಾಕ್ಟರಿ ಪ್ರಾರಂಭಿಸದಂತೆ, ಅಸ್ಪೃಶ್ಯ ಅಲೆಮಾರಿ ಸಮುದಾಯ ಒಕ್ಕೂಟದಿಂದ ಒಳಮೀಸಲಾತಿ ಕಲ್ಪಿಸುವಂತೆ, ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ ಹೀಗೆ ಅನೇಕ ಮನವಿ ಪತ್ರಗಳನ್ನು ಸರದಿ ಸಾಲಿನಲ್ಲಿ ನಿಂತು ಸಲ್ಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ ಸೇರಿದಂತೆ ಮುಖಂಡರಿದ್ದರು.



