ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ತಲಾ ರೂ. 25 ಕೋಟಿ ಮಂಜೂರು ಮಾಡಿ ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ. ಅನುದಾನ ಕೊಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಹೆಜ್ಜೆ ಇಟ್ಟಿದ್ದಾರೆ.
ಸಿಎಂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಹಿಂದೆ ಕಾಂಗ್ರೆಸ್ ಶಾಸಕರಿಗೆ ಮಾತ್ರ 50 ಕೋಟಿ ರೂ. ಅನುದಾನ ಸಿಎಂ ರಿಲೀಸ್ ಮಾಡಿದ್ದರು. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಧಿವೇಶನದಲ್ಲಿ ಈ ಬಗ್ಗೆ ವಿಪಕ್ಷಗಳು ವಿರೋಧ ಮಾಡಿದ್ದವು. ಇದೀಗ ವಿಪಕ್ಷಗಳ ಶಾಸಕರಿಗೂ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ.
ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಅಡಿ ಬರುವ ರಸ್ತೆ, ಸೇತುವೆ ಹಾಗೂ ನಗರಾಭಿವೃದ್ಧಿ ಇಲಾಖೆ ಅಡಿ ಬರೋ ನಗರ ಪ್ರದೇಶ ಕಾಮಗಾರಿಗಳಿಗೆ 18.75 ಕೋಟಿ ರೂ. ಬಿಡುಗಡೆ ಹಾಗೂ ವಿವೇಚನಾಧಿಕಾರದಡಿ ವಿಧಾನಸಭೆ ಸದಸ್ಯರು ಆಯ್ಕೆ ಮಾಡಬಹುದಾದ ಇತರ ಇಲಾಖೆ ಕಾಮಗಾರಿಗಳಿಗೆ 6.25 ಕೋಟಿ ರೂ. ಬಿಡುಗಡೆ ಸೇರಿ ಒಟ್ಟು 25 ಕೋಟಿ ರೂ. ಅನುದಾನ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.