ಕೋಲಾರ: ಸಚಿವ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟ ಸುಳಿವು ನೀಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, “ಸಂಪುಟ ಪುನಾರಚನೆ ವೇಳೆ ಎಲ್ಲವನ್ನು ನೋಡೋಣ,” ಎಂದು ಹೇಳಿ ಹೊಸ ಬೆಳವಣಿಗೆಗೆ ಇಂಗಿತ ನೀಡಿದರು. ಜಿಲ್ಲೆಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಕೋಲಾರ ಜಿಲ್ಲೆಯ ನಾಲ್ವರು ಶಾಸಕರ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದರು. ಇದೇ ವೇಳೆ, ಯತ್ತಿನಹೊಳೆ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಅನುದಾನ ಬಿಡುಗಡೆ ವಿಚಾರವಾಗಿ ಜೆಡಿಎಸ್ ಶಾಸಕರೊಬ್ಬರು ನ್ಯಾಯಾಲಯದ ಮೊರೆ ಹೋದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್‌ನ ಆಡಳಿತಾವಧಿಯನ್ನು ನೆನಪಿಸಿ, “ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಮೇಶ್ ಕುಮಾರ್ ಅವರ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದರು?” ಎಂದು ಪ್ರಶ್ನಿಸಿ ಜೆಡಿಎಸ್‌ಗೆ ತಿರುಗೇಟು ನೀಡಿದರು.



