ವಿಜಯಸಾಕ್ಷಿ ಸುದ್ದಿ, ಲಕ್ಷ್ಮೀಶ್ವರ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಗೊಂದಲದಲ್ಲಿಯೇ ಮುಳಗಿದ್ದು, ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಸಿದ್ದರಾಮಯ್ಯನವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ್ ಟೀಕಿಸಿದರು.
ಲಕ್ಷೇಶ್ವರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ `ಬಿಜೆಪಿ ಸರಕಾರ ಶೇ. 40 ಭ್ರಷ್ಟಾಚಾರ’ ಎನ್ನುವ ಆರೋಪ ಮಾಡಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷ ಅದನ್ನು ಮೀರಿ ಶೇ. 60 ಭ್ರಷ್ಟಾಚಾರ ನಡೆಸುತ್ತಿದೆ. ರಾಜ್ಯದಲ್ಲಿ ದಬ್ಬಾಳಿಕೆ, ದೌರ್ಜನ್ಯ, ಭ್ರಷ್ಟಾಚಾರ ಮಿತಿಮೀರಿದ್ದು, ಜನತೆ ಇವರ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲ, ಜಾತಿ ತಾರತಮ್ಯ ಮಾಡುತ್ತಿದ್ದಾರೆ. ದಲಿತ ಹಾಗೂ ಮುಸ್ಲಿಮರ ಹೆಸರಲ್ಲಿ ಕಾಂಗ್ರೆಸ್‌ನವರು ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಕೋಮುವಾದಿಗಳು ಎನ್ನುತ್ತೀರಿ, ಆದರೆ ನಿಜವಾದ ಕೋಮುವಾದಿಗಳು ಕಾಂಗ್ರೆಸ್‌ವರು ಎಂದು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಜನಗಣತಿ ಮಾಡಲು ಹೊರಟಿರುವದಕ್ಕೆ ಯಾವುದೇ ಸಿದ್ಧತೆಗಳಿಲ್ಲ, ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಡೀ ರಾಜ್ಯದ ಜನತೆಯ ಸಮೀಕ್ಷೆ ಕೇವಲ 15 ದಿನಗಳಲ್ಲಿ ಮುಗಿಸುವ ತರಾತುರಿಯ ನಿರ್ಧಾರ ಏಕೆ ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯನವರು ಮೊದಲು ಜಾತ್ಯಾತೀತ, ಯಾವುದೇ ಆರೋಪಗಳಿಲ್ಲದ ಒಳ್ಳೆಯ ವ್ಯಕ್ತಿಯಾಗಿದ್ದರು. ಆದರೆ ಕಾಂಗ್ರೆಸ್ ಸೇರಿದ ಮೇಲೆ ತಮ್ಮತನವನ್ನು ಮರೆತುಬಿಟ್ಟಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಎಲ್ಲ ವಸ್ತುಗಳ ಬೆಲೆ ಏರಿಕೆ, ವಿರೋಧ ಪಕ್ಷದ ಶಾಸಕರಿಗೆ ಸರಿಯಾದ ಅನುದಾನ ನೀಡುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಒಂದು ರೀತಿಯ ಅರಾಜಕತೆ ತಾಂಡವವಾಡುತ್ತಿದೆ. ನುಡಿದಂತೆ ನಡೆದಿದ್ದೇವೆ ಎನ್ನುವ ಸಿದ್ದರಾಮಯ್ಯ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಾಕೀರಹುಸೇನ್ ಹವಾಲ್ದಾರ ಇದ್ದರು.



