ವಿಜಯಸಾಕ್ಷಿ ಸುದ್ದಿ, ಬೆಳಗಾವಿ ಸುವರ್ಣಸೌಧ: ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಸುವರ್ಣಸೌಧದಲ್ಲಿ ಇ-ಖಾತಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳು ಮತ್ತು ಮನೆಯ ಹಕ್ಕುಪತ್ರಗಳ ವಿತರಣೆಗೆ ಚಾಲನೆ ನೀಡಿದರು.
ಇದೇ ವೇಳೆ ಬೆಳಗಾವಿಯ 127 ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ಪತ್ರ ವಿತರಣೆ ಸಂಬಂಧ ಸಾಂಕೇತಿಕವಾಗಿ 10 ಜನರಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು, ವಿಜಯಪುರದ ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.
ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಾರ್ವಜನಿಕರ ಆಸ್ತಿ ದಾಖಲೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಇ-ಖಾತಾ ಸೇವೆ ಒದಗಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸುವೆ. ನಗರಾಭಿವೃದ್ಧಿ ಮತ್ತು ನಗರ ಯೋಜನೆಯ ಸಚಿವರು ಉತ್ತಮ ಕಾರ್ಯ ಮಾಡಿದ್ದಾರೆ. ಪೌರ ಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರು ನೆಮ್ಮದಿಯಾಗಿರುವಂತೆ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ಮತ್ತು ಮನೆಯ ಹಕ್ಕುಪತ್ರ ವಿತರಣೆ ಮಾಡಿರುವುದು ರಾಜ್ಯ ಸರ್ಕಾರ ಮತ್ತು ಪೌರಾಡಳಿತ ಸಚಿವರ ಉತ್ತಮ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಭೈರತಿ ಸುರೇಶ್ ಮಾತನಾಡಿ, ಇ-ಆಸ್ತಿ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ಇ-ಖಾತಾ ನೀಡಲು 2016ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಅದರಂತೆ ರಾಜ್ಯದ 320 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈವರೆಗೆ ಆಸ್ತಿ ಮಾಲೀಕರು ಇ-ಆಸ್ತಿ ತಂತ್ರಾಂಶದ ಮೂಲಕ ಅಂದಾಜು 29 ಲಕ್ಷ ಇ-ಆಸ್ತಿಗಳಿಗೆ ಇ-ಖಾತಾ ಪಡೆದಿರುತ್ತಾರೆ. ಈ ಅಭಿಯಾನದ ಮುಂದುವರೆದ ಭಾಗವಾಗಿ ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಲಾಗಿದೆ. ಆಸ್ತಿ ಮಾಲೀಕರು ಯಾವುದೇ ಮಧ್ಯವರ್ತಿಗಳಿಲ್ಲದೇ ಹಾಗೂ ಯಾವುದೇ ಅಧಿಕಾರಿ/ಸಿಬ್ಬಂದಿಯನ್ನು ಸಂಪರ್ಕಿಸದೇ ತಮ್ಮ ಮನೆಯಲ್ಲಿ ಕುಳಿತು ಸರಳವಾಗಿ ಸುಲಭವಾಗಿ ಇ-ಖಾತಾ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿದೆ. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಶೀಲಿಸುತ್ತವೆ. ಅಂತಿಮ ಇ-ಖಾತಾವನ್ನು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆಸಿಫ್ ಸೇಠ್ ಮಾತನಾಡಿದರು. ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ, ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಪೊನ್ನಣ್ಣ, ಕೂಡ್ಲಿಗಿ ಶಾಸಕ ಶ್ರೀನಿವಾಸ, ವಿಧಾನಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ನಸೀರ್ ಅಹ್ಮದ್, ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಮಂಗೇಶ ಪವಾರ, ಉಪ ಮಹಾಪೌರರಾದ ವಾಣಿ ಜೋಶಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ ಗಿರಿನಾಥ, ಸರ್ಕಾರದ ಕಾರ್ಯದರ್ಶಿಗಳಾದ ದೀಪಾ ಚೋಳನ್ ಸೇರಿದಂತೆ ಪ್ರಭುಲಿಂಗ ಕವಳಿಕಟ್ಟಿ, ಡಾ. ಸೆಲ್ವಮಣಿ ಆರ್ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.
ಬಾಕ್ಸ್
ಪೌರಕಾರ್ಮಿಕರ ಹೊರಗುತ್ತಿಗೆ ಪದ್ಧತಿಯನ್ನು 2017ರಲ್ಲಿ ಸ್ಥಗಿತಗೊಳಿಸಿ, ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದವರಿಗೆ ವಿಶೇಷ ನೇಮಕಾತಿಯಡಿ ಅವಕಾಶ ನೀಡಲಾಗುತ್ತಿದೆ. ವಿವಿಧ ಹಂತಗಳಲ್ಲಿ ಸಾವಿರಾರು ಪೌರಕಾರ್ಮಿಕರ ನೇಮಕಕ್ಕೆ ಅನುಮತಿ ನೀಡಲಾಗಿದೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.



