ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯವನ್ನು ಎಡಗೈ, ಬಲ ಮತ್ತು ಇತರೆ ಎಂಬ ಮೂರು ಗುಂಪುಗಳಾಗಿ ಮರುವರ್ಗೀಕರಣ ಮಾಡಲಾಗಿದ್ದು, ಕ್ರಮವಾಗಿ 6%, 6% ಮತ್ತು 5% ಒಳಮೀಸಲಾತಿ ನೀಡಲು ನಿನ್ನೆ ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಇದೀಗ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಮೀಸಲಾತಿ ಬಗ್ಗೆ ತೆಗೆದುಕೊಂಡು ನಿರ್ಣಯವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಮುಖ್ಯವಾಗಿ ಈ ವೇಳೆ ಏನಾದರೂ ಬದಲಾವಣೆ ಮಾಡಬೇಕಾದ್ರೆ ಮುಂದಿನ ಹಂತದಲ್ಲಿ ತೀರ್ಮಾನ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ, ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಎಡಗೈ ಸಮುದಾಯಕ್ಕೆ 6%, ಬಲ ಸಮುದಾಯಕ್ಕೆ 6% ಹಾಗೂ ಸ್ಪೃಶ್ಯ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನ ಮಾಡಲಾಗಿದೆ.
ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸುಗಳನ್ನು ಕೆಲ ಮಾರ್ಪಾಡುಗಳೊಂದಿಗೆ ಒಳ ಮೀಸಲಾತಿ ಕಲ್ಪಿಸಲಾಗಿದೆ. A, B, C ಎಂದು ವರ್ಗೀಕರಣ ಮಾಡಿ ಮೀಸಲಾತಿ ಹಂಚಲಾಗಿದ್ದು, ಒಳ ಮೀಸಲಾತಿ ಹೋರಾಟದ ಮೊಕದ್ದಮೆ ಹಿಂಪಡೆಯಲೂ ತೀರ್ಮಾನಿಸಲಾಗಿದೆ. ಈ ಮೂಲಕ ದಶಗಳ ಹೋರಾಟಕ್ಕೆ ನಮ್ಮ ಸರ್ಕಾರ ನ್ಯಾಯ ಒದಗಿಸಿದೆ ಎಂದರು.



