ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಕರ್ನಾಟಕ ಭವನ-೧ ಉದ್ಘಾಟನೆಗೆಂದು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಬೇಟಿ ಮಾಡಿ ಮಾತುಕತೆ ನಡೆಸಿದರು.
ಕಳೆದವಾರ ಸಿಎಂ ಆರೋಗ್ಯ ವಿಚಾರಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿಗೆ ಬನ್ನಿ ಮಾತನಾಡೋಣ ಎಂದು ಸೂಚಿಸಿದ್ದರಂತೆ. ಹೀಗಾಗಿ ರಾಹುಲ್ ಗಾಂಧಿ ಭೇಟಿ ಬಳಿಕ ಇದೀಗ ಖರ್ಗೆ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡುವ ಸಾಧ್ಯತೆ ಇದೆ. ಜತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸಚಿವ ಕೆ.ಎನ್ ರಾಜಣ್ಣಗೆ ಹನಿಟ್ರ್ಯಾಪ್ ಯತ್ನ, ಖಾಲಿ ಇರುವ ವಿಧಾನಪರಿಷತ್ ಸ್ಥಾನಗಳಿಗೆ ನಾಮನಿರ್ದೇಶನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಹೈಕಮಾಂಡ್ ನಾಯಕರಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.