ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಹಾವೇರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹಾವೇರಿಯ ನೂತನ ಮೆಡಿಕಲ್ ಕಾಲೇಜು ಹಾಗೂ ಐಬಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದ್ದಾರೆ. ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಿಎಂ ಹಾಗೂ ಡಿಸಿಎಂ ಅವರು ಹಾವೇರಿಯ ಹುಕ್ಕೇರಿ ಮಠಕ್ಕೆ ಭೇಟಿ ನೀಡಿ ಸದಾಶಿವ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.
ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಶೀಘ್ರದಲ್ಲಿ ಉದ್ಘಾಟನೆ ಆಗಬೇಕೆಂಬ ಆಸೆ ಇತ್ತು. ಲೋಕಸಭೆ ಚುನಾವಣೆಗೆ ಮುಂಚೆಯೇ ಕಟ್ಟಡ ಉದ್ಘಾಟನೆ ಮಾಡುವ ಉದ್ದೇಶ ಇದ್ದರೂ, ಕೇಂದ್ರದ ನಾಯಕರು ಬರಲಿದ್ದಾರೆ ಎಂಬ ಕಾರಣದಿಂದ ಉದ್ಘಾಟನೆ ಸ್ವಲ್ಪ ತಡವಾಯಿತು. ಕೇಂದ್ರ ನಾಯಕರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡಿದ್ದರು ಎಂದರು.
ಈ ಮೆಡಿಕಲ್ ಕಾಲೇಜು ಆರಂಭವಾದರೆ ಹಾವೇರಿ ಜಿಲ್ಲೆಯ ಜನರು ಚಿಕಿತ್ಸೆಗಾಗಿ ದಾವಣಗೆರೆ ಹಾಗೂ ಹುಬ್ಬಳ್ಳಿಗೆ ಹೋಗುವ ಅಗತ್ಯ ಕಡಿಮೆಯಾಗಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಅವರ ಅಧಿಕಾರದ ಅವಧಿಯಲ್ಲಿ ಮೆಡಿಕಲ್ ಕಾಲೇಜು ಉದ್ಘಾಟನೆ ಆಗುತ್ತಿರುವುದು ಇದೇ ಮೊದಲ ಬಾರಿಗೆ. ತಾನು ಉಸ್ತುವಾರಿ ವಹಿಸಿರುವ ಜಿಲ್ಲೆಗೆ ಪ್ರತಿಷ್ಠಿತ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಸಿಎಂ ಹಾಗೂ ಡಿಸಿಎಂ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಶಿವಾನಂದ ಪಾಟೀಲ್ ತಿಳಿಸಿದ್ದಾರೆ.



